ಕೊಟ್ಟಾಯಂ: ನೀರಿನಲ್ಲಿ ಮುಳುಗುತ್ತಿದ್ದ ವಲಸಿಗ ಕಾರ್ಮಿಕರನ್ನು ರಕ್ಷಿಸಲು ಹೋದ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಕೊಟ್ಟಾಯಂ ನಲ್ಲಿ ನಡೆದಿದೆ.
ನೆರೆ ಮನೆಯವರ ಬಾವಿಯನ್ನು ಸ್ವಚ್ಛಗೊಳಿಸಲು ಬಂದಿದ್ದ ಪಶ್ಚಿಮ ಬಂಗಾಳದ ಮುಗಥಾರ್ ಹಾಗೂ ಜಗಂಗೀರ್ 36 ರಿಂಗ್ ಗಳಷ್ಟು ಆಳವಿರುವ ಬಾವಿಯಲಿ ಮುಳುಗಿ ಪ್ರಾಣಾಪಾಯಕ್ಕೆ ಸಿಲುಕಿ, ಸಹಾಯಕ್ಕಾಗಿ ಕೂಗುತ್ತಿದ್ದದ್ದು ಆಂಟನಿ ವರ್ಘೀಸ್ ಗೆ ಕೇಳಿಸಿದೆ. ತಕ್ಷಣವೆ ಎಚ್ಚೆತ್ತುಕೊಂಡ ಆಂಟನಿ ತನಗೆ ಎದುರಾಗಬಹುದಾದ ಆಪತ್ತನ್ನೂ ಲೆಕ್ಕಿಸದೇ ಬಾವಿಗೆ ಜಿಗಿದು ಕಾರ್ಮಿಕರ ಪ್ರಾಣ ರಕ್ಷಿಸಲು ಮುಂದಾಗಿದ್ದಾರೆ.
ಆದರೆ ಕಾರ್ಮಿಕರನ್ನು ರಕ್ಷಿಸಲು ಹೋದ ಆಂಟನಿಯೂ ಸೇರಿದಂತೆ ಮೂರೂ ಜನರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ನೀರಿನಲ್ಲಿ ಮುಳುಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಚಿಂಗವನಂ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿ ಸಿಲುಕಿಕೊಂಡಿದ್ದವರನ್ನು ಹತ್ತಿರದಲ್ಲೇ ಇದ್ದ ಚಂಗನಸ್ಸೆರಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮೂವರೂ ಸಾವನ್ನಪ್ಪಿದ್ದರು.
Advertisement