
ನವದೆಹಲಿ: ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 18 ರಾಜ್ಯಗಳಲ್ಲಿ ಪ್ರಾಯೋಗಿಕ ಕಾರ್ಯಕ್ರಮವೊಂದನ್ನು ಆರಂಭಿಸಲಿದೆ. ಈ ಕಾರ್ಯಕ್ರಮದಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೋಧಿಸುವ ಇಚ್ಛೆಯುಳ್ಳ ಶಿಕ್ಷಣ ತಜ್ಞರು, ವಿದ್ಯಾವಂತರು ಮತ್ತು ಮುಖ್ಯವಾಗಿ ನಿವೃತ್ತ ಶಿಕ್ಷಕರು ಸ್ವಯಂಪ್ರೇರಿತವಾಗಿ ಬಂದರೆ ಅವರನ್ನು ಕಾರ್ಯಕ್ರಮದಡಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಇದೇ ವರ್ಷ ಏಪ್ರಿಲ್ ನಿಂದ ಆರಂಭಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಹರ್ಯಾಣ, ಛತ್ತೀಸ್ ಗಢ, ಗುಜರಾತ್, ಒಡಿಶಾ, ಪಂಜಾಬ್, ತೆಲಂಗಾಣ, ಗೋವಾ, ದೆಹಲಿ ಮತ್ತು ತ್ರಿಪುರಾ ರಾಜ್ಯಗಳು ಭಾಗವಹಿಸಲು ಒಪ್ಪಿಕೊಂಡಿವೆ.
ಈ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಹೆಸರುಗಳನ್ನು ಸೇರಿಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮೊಬೈಲ್ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಲಿದೆ. ಈ ಕಾರ್ಯಕ್ರಮದ ವಿಸ್ತಾರ ಚೌಕಟ್ಟನ್ನು ತಯಾರುಪಡಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಬಂದ ಸಲಹೆಗಳು ಮತ್ತು ಅನುಭವಗಳನ್ನು ಒಟ್ಟುಗೂಡಿಸಿ ಕಾರ್ಯಕ್ರಮದ ಚೌಕಟ್ಟನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದರು.
Advertisement