
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಹಿಮಪಾತದಲ್ಲಿ ಮಡಿದ ಒಂಬತ್ತು ವೀರಯೋಧರಿಗೆ ಭಾರತೀಯ ಸೇನೆ ಅಂತಿಮ ನಮನ ಸಲ್ಲಿಸಿತು.
ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಭಾರತೀಯ ಸೇನೆಯ ಹಲವು ಅಧಿಕಾರಿಗಳು ರಕ್ಷಣಾ ಇಲಾಖೆ ಅಧಿಕಾರಿಗಳು ಯೋಧರ ಅಂತಿಮ ದರ್ಶನ ಪಡೆದರು.
ಹುತಾತ್ಮರಾದ 9 ಯೋಧರ ಪಾರ್ಥಿವ ಶರೀರವನ್ನು ಭಾನುವಾರ ಲೇಹ್ ಗೆ ತರಲಾಗಿತ್ತು. ಇದೀಗ ಪಾಲಂ ವಿಮಾನ ನಿಲ್ದಾಣದಲ್ಲಿ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಪಾರ್ಥಿವ ಶರೀರವನ್ನು ಬೆಂಗಳೂರು, ಪುಣೆ, ಹೈದರಾಬಾದ್, ಮಧುರೈ, ಚೆನ್ನೈ ಹಾಗೂ ತಿರುವನಂತಪುರಂಗೆ ರವಾನಿಸಲಾಗುತ್ತದೆ.
ಸಿಯಾಚಿನ್ ನಲ್ಲಿ ಫೆಬ್ರವರಿ 3 ರಂದು ಸಂಭವಿಸಿದ ಭೀಕರ ಹಿಮಪಾತದಲ್ಲಿ 9 ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಧಾರವಾಡದ ಯೋಧ ಹನುಮಂತಪ್ಪ ಕೊಪ್ಪದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕಳೆದ ವಾರವೇ ಅವರ ಪಾರ್ಥಿವ ಶರೀರವನ್ನು ತವರಿಗೆ ತಂದು ಅಂತ್ಯಕ್ರಿಯೆ ನಡೆಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಉಳಿದ ಯೋಧರ ಪಾರ್ಥಿವ ಶರೀರಗಳನ್ನು ತರುವಲ್ಲಿ ವಿಳಂಬವಾಗಿದೆ.
Advertisement