ಎಸ್‌ಎಆರ್ ಗೀಲನಿ (ಫೋಟೋ ಕೃಪೆ: ಎಎನ್ ಐ)
ದೇಶ
ದೇಶದ್ರೋಹ ಆರೋಪ: ದೆಹಲಿ ವಿವಿ ಮಾಜಿ ಉಪನ್ಯಾಸಕನ ಬಂಧನ
ದೆಹಲಿ ವಿಶ್ವ ವಿದ್ಯಾನಿಲಯದ ಮಾಜಿ ಉಪನ್ಯಾಸಕ ಎಸ್‌ಎಆರ್ ಗೀಲನಿ ಅವರನ್ನು ದೇಶದ್ರೋಹ ಆರೋಪ ಮೇರೆಗೆ ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ....
ನವದೆಹಲಿ: ದೆಹಲಿ ವಿಶ್ವ ವಿದ್ಯಾನಿಲಯದ ಮಾಜಿ ಉಪನ್ಯಾಸಕ ಎಸ್‌ಎಆರ್ ಗೀಲನಿ ಅವರನ್ನು ದೇಶದ್ರೋಹ ಆರೋಪ ಮೇರೆಗೆ ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಗೀಲನಿ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.
ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ), 120 ಬಿ ( ಅಪರಾಧ ಕೃತ್ಯ) ಮತ್ತು 149 (ಕಾನೂನು ಉಲ್ಲಂಘನೆ) ಅಡಿಯಲ್ಲಿ ಕೇಸು ದಾಖಲಾಗಿದ್ದು, ಮುಂಜಾನೆ 3 ಗಂಟೆಯ ವೇಳೆಗೆ ಬಂಧನ ನಡೆದಿದೆ ಎಂದು ನವದೆಹಲಿ ಡಿಸಿಪಿ ಜತಿನ್ ನಾರ್ವಲ್ ಹೇಳಿದ್ದಾರೆ.
ಬಂಧನದ ನಂತರ ಗೀಲನಿ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನೈಯ್ಯಾ ಕುಮಾರ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಬಂಧನ ನಡೆಸಿದ ಬೆನ್ನಲ್ಲೇ ಗೀಲನಿ ಬಂಧನ ನಡೆದಿದೆ.
ಪಾರ್ಲಿಮೆಂಟ್ ದಾಳಿಕೋರ ಅಫ್ಜಲ್‌ಗುರುವನ್ನು ಗಲ್ಲಿಗೇರಿಸಿದ್ದನ್ನು ಪ್ರಶ್ನಿಸಿ ಫೆ.9 ರಂದು ಜೆಎನ್‌ಯುನಲ್ಲಿ ವಿದ್ಯಾರ್ಥಿ ಸಂಘಟನೆಯೊಂದು ಪ್ರತಿಭಟನೆ ನಡೆಸಿತ್ತು.
ಇದಾದನಂತರ ಫೆ. 10ರಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಂಪೊಂದು ಅಫ್ಜಲ್‌ಗೆ ಜೈಕಾರ ಕೂಗಿ ವಿವಾದ ಸೃಷ್ಟಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗೀಲಾನಿ ಮತ್ತು ಇನ್ನು ಕೆಲವರ ವಿರುದ್ಧ ಇದೀಗ ಕೇಸು ದಾಖಲಿಸಲಾಗಿದೆ.
ಗೀಲಾನಿ ಅವರೇ ಈ ಕಾರ್ಯಕ್ರಮದ ಪ್ರಧಾನ ಸೂತ್ರಧಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಹಾಲ್ ಬುಕ್ ಮಾಡಿದ್ದೂ ಗೀಲನಿ ಅವರ ಇಮೇಲ್ ಮೂಲಕವಾಗಿದೆ. ಸಾರ್ವಜನಿಕ ಸಭೆ ನಡೆಸುವುದಕ್ಕಾಗಿ ಈ ಹಾಲ್ ಬುಕ್ ಮಾಡಿದ್ದರೂ ಅಲ್ಲಿ ನಡೆದದ್ದೇ ಬೇರೆಯಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದೇ ವೇಳೆ ಹಾಲ್ ಬುಕ್ ಮಾಡಲು ಸಹಾಯ ಮಾಡಿದ್ದ ಪ್ರೆಸ್ ಕ್ಲಬ್ ಸದಸ್ಯ ಹಾಗು ದೆಹಲಿ ವಿವಿ ಉಪನ್ಯಾಸಕ ಅಲಿ ಜಾವೇದ್ ಅವರು ಕಳೆದ ಎರಡು ದಿನಗಳಿಂದ ಪೊಲೀಸ್ ವಿಚಾರಣೆಗೊಳಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ