''ಮಾನವೀಯ ನೆಲೆಯಲ್ಲಿ ಮಗನನ್ನು ಬಿಡುಗಡೆ ಮಾಡಿ'': ಹಮೀದ್ ಅನ್ಸಾರಿ ಪೋಷಕರ ಮನವಿ

ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಆಪಾದನೆ ಮೇಲೆ ಜೈಲುಪಾಲಾಗಿರುವ ಮುಂಬೈ ಮೂಲದ ಎಂಜಿನಿಯರ್ ನ್ನು ಸಹಾನುಭೂತಿಯಿಂದ...
ಹಮೀದ್ ಅನ್ಸಾರಿ(ಎಡ ಚಿತ್ರ) ಮತ್ತು ಪೋಷಕರು(ಬಲಚಿತ್ರ)
ಹಮೀದ್ ಅನ್ಸಾರಿ(ಎಡ ಚಿತ್ರ) ಮತ್ತು ಪೋಷಕರು(ಬಲಚಿತ್ರ)

ಮುಂಬೈ: ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ ಆಪಾದನೆ ಮೇಲೆ ಜೈಲುಪಾಲಾಗಿರುವ ಮುಂಬೈ ಮೂಲದ ಎಂಜಿನಿಯರ್ ನ್ನು ಸಹಾನುಭೂತಿಯಿಂದ ಕಂಡು ಮಾನವೀಯ ನೆಲೆಯ ಮೇಲೆ ಬಿಡುಗಡೆ ಮಾಡುವಂತೆ ಆತನ ಪೋಷಕರು ಪಾಕಿಸ್ತಾನದ ಅಧಿಕಾರಿಗಳನ್ನು ಕೋರಿದ್ದಾರೆ.

ನನ್ನ ಮಗನ ಕೇಸನ್ನು ರಾಜಕೀಯ ಹೊರತುಪಡಿಸಿ ಸಹಾನುಭೂತಿ ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಪರಿಗಣಿಸಬೇಕು ಎಂದು 31 ವರ್ಷದ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಪದವೀಧರ ಹಮೀದ್ ಅನ್ಸಾರಿಯ ತಾಯಿ ಫೌಜಿಯಾ ಅನ್ಸಾರಿ ಮನವಿ ಮಾಡಿದ್ದಾರೆ. ಹಮೀದ್ ಅನ್ಸಾರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ನೀಡಿ ಪಾಕಿಸ್ತಾನ ನ್ಯಾಯಾಲಯ ಆದೇಶ ನೀಡಿದೆ.2012ರಲ್ಲಿ ಅನ್ಸಾರಿ ಆನ್ ಲೈನ್ ನಲ್ಲಿ ಪರಿಚಿತಳಾದ ಗೆಳತಿಯನ್ನು ಭೇಟಿ ಮಾಡಲು ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದನು. ನಂತರ ಅವನ ಪತ್ತೆಯಿರಲಿಲ್ಲ. ಅವನನ್ನು ಪಾಕಿಸ್ತಾನದ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಪ್ರವೇಶಿಸಿರುವುದು ಗೊತ್ತಾಗಿ ಮಿಲಿಟರಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಯಿತು. ನಂತರ ನ್ಯಾಯಾಲಯ ಬೇಹುಗಾರಿಕೆ ಆರೋಪದ ಮೇಲೆ ಮೂರು ವರ್ಷಗಳ ಕಾಲ ಜೈಲುಶಿಕ್ಷೆ ನೀಡಿ ತೀರ್ಪು ಪ್ರಕಟಿಸಿತು.

ತಮ್ಮ ಮಗ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದ ಕಸ್ಟಡಿಯಲ್ಲಿದ್ದಾನೆ ಎಂದು ಕಳೆದ ಜನವರಿಯಲ್ಲಿ ತಿಳಿದ ಹಮೀದ್ ಅನ್ಸಾರಿಯ ಪೋಷಕರು ಪಾಕಿಸ್ತಾನ ಕೋರ್ಟ್ ಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಪಾಕಿಸ್ತಾನದ ಕೈಬರ್ ಪಕ್ತುಂಕ್ವಾ ಪ್ರಾಂತ್ಯದಲ್ಲಿನ ಕೊಹಾಟ್ ನಗರದಲ್ಲಿ ಹಮೀದ್ ಗೆ ಕಳೆದ ಭಾನುವಾರ ಶಿಕ್ಷೆ ಪ್ರಕಟಿಸಲಾಗಿದ್ದು, ಪೇಶಾವರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

'' ಜನವರಿ 13ರಂದು ನಮ್ಮ ಮಗ ಬದುಕಿದ್ದಾನೆ ಮತ್ತು ಪಾಕಿಸ್ತಾನ ಸೇನೆಯ ಜೈಲಿನಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ ಎಂದು ಗೊತ್ತಾಯಿತು. ಕೊನೆಗಾದರೂ ನಮ್ಮ ಪುತ್ರನು ಸುರಕ್ಷಿತವಾಗಿ, ಕ್ಷೇಮವಾಗಿ ನಮಗೆ ಸಿಗುತ್ತಾನೆ ಎಂಬ ಆಶಾವಾದದಲ್ಲಿ ನಾವಿದ್ದೆವು. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಸಾಧ್ಯತೆ ಕ್ಷೀಣವಾಗುತ್ತಿದ್ದು, ನಮ್ಮ ಮಗ ಭಾರತಕ್ಕೆ ಬರಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ನಮಗನ್ನಿಸುತ್ತದೆ ಎಂದು ದುಃಖದಿಂದ ಹೇಳುತ್ತಾರೆ ಹಮೀದ್ ನ 55 ವರ್ಷದ ತಾಯಿ ಫೌಜಿಯಾ.

''ನಾವು ನಮ್ಮ ಆಶಾವಾದವನ್ನು ಕಳೆದುಕೊಳ್ಳುವುದಿಲ್ಲ. ನಮಗೆ ದೇವರ ಮೇಲೆ ನಂಬಿಕೆಯಿದೆ. ನಮಗೆ ಭಾರತ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಮಗನು ಸುರಕ್ಷಿತವಾಗಿ ಮನೆ ಸೇರಲು ಏನೆಲ್ಲಾ ಸಾಧ್ಯತೆಗಳಿವೆಯೋ ಅಂತಹ ಪ್ರಯತ್ನಗಳನ್ನೆಲ್ಲಾ ಮಾಡುತ್ತಿದ್ದೇವೆ. ಮಾನವ ಜೀವನ ಅತ್ಯಂತ ಅಮೂಲ್ಯವಾದದ್ದು. ನನ್ನ ಮಗನಂತಹ ವಿದ್ಯಾವಂತರು ಪಾಕಿಸ್ತಾನ ಜೈಲಿನಲ್ಲಿ ಅವರ ಆಯಸ್ಸನ್ನು ಕಳೆಯಬಾರದು. ಭಾರತ ಮತ್ತು ಪಾಕ್ ಸರ್ಕಾರಗಳು ಮಾನವೀಯ ನೆಲೆ ಮೇಲೆ ನಮ್ಮ ಮಗನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಸಹಕರಿಸುತ್ತವೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಫೌಜಿಯಾ.

''ನನ್ನ ಮಗ ಏನು ತಪ್ಪು ಮಾಡಿದ್ದಾನೆ ಅಂತ ನನಗೆ ಗೊತ್ತಿಲ್ಲ. ಅವನು ಕಾಣೆಯಾಗುವ ಮುಂಚೆ ಪಾಕಿಸ್ತಾನದಲ್ಲಿನ ಸ್ನೇಹಿತರ ಜೊತೆ ಫೇಸ್ ಬುಕ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದ. ಯಾವುದೋ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಹುಡುಗಿಗೆ ಸಹಾಯ ಮಾಡಲೆಂದು ಪಾಕಿಸ್ತಾನಕ್ಕೆ ಹೋಗಿದ್ದ ಎಂದು ವಿವರಿಸುತ್ತಾರೆ ಹಮೀದ್ ಅನ್ಸಾರಿ ತಾಯಿ ಫೌಜಿಯಾ. ಅವರು ಸ್ವತಃ ಜ್ಯೂನಿಯರ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿಯಾಗಿದ್ದಾರೆ. ಅವರು ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅನ್ಸಾರಿ ತಂದೆ ನೆಹಲ್ ಅಹ್ಮದ್ ಅನ್ಸಾರಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾಗಿದ್ದು, ಹಿರಿಯ ಸಹೋದರ ಖಲೀದ್ ಅನ್ಸಾರಿ ಡೆಂಟಲ್ ಸರ್ಜನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com