
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನ್ವಯ ದೆಹಲಿ ಕೋರ್ಟ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರ ಮೂವರಿಗೆ ವಿಚಾರಣೆಗೆ ಖುದ್ದು ಹಾಜರಿಯಿಂದ ವಿನಾಯ್ತಿ ನೀಡಿದೆ.
ಶನಿವಾರ ನಡೆದ ವಿಚಾರಣೆಗೆ ಪ್ರಕರಣದ ಆರೋಪಿಗಳು ಖುದ್ದು ಹಾಜರಾಗಲಿಲ್ಲ. ಮತ್ತೊಬ್ಬ ಆರೋಪಿ ಸ್ಯಾಮ್ ಪಿತ್ರೋಡ ಅವರಿಗೂ ನ್ಯಾಯಾಲಯ ಶನಿವಾರ ಷರತ್ತು ಬದ್ಧ ಜಾಮೀನು ನೀಡಿದೆ. 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತಾ ಖಾತರಿ ನೀಡುವಂತೆ ನ್ಯಾಯಾಲಯವು ಪಿತ್ರೋಡಾ ಅವರಿಗೆ ಸೂಚಿಸಿದೆ.
2015ರ ಡಿ. 19ರಂದು ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿನ ಪಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಬಳಿಕ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿ, ವಿಚಾರಣೆಯನ್ನು ಫೆ. 20ಕ್ಕೆ ಮುಂದೂಡಿತ್ತು. ಮಾರ್ಚ್ 21ರಂದು ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.
ಕಾಂಗ್ರೆಸ್ ಖಜಾಂಚಿ ಮೋತಿಲಾಲ್ ವೋರಾ, ಗಾಂಧಿ ಕುಟುಂಬದ ಸ್ನೇಹಿತ ಸುಮನ್ ದುಬೇ ಮತ್ತು ಆಸ್ಕರ್ ಫರ್ನಾಂಡಿಸ್ ಅವರಿಗೆ ಕೋರ್ಟ್ ಗೆ ಖುದ್ದು ಹಾಜರಾಗುವುದರಿಂದ ನ್ಯಾಯಾಲಯ ವಿನಾಯಿತಿ ನೀಡಿದೆ
Advertisement