
ಇಸ್ಲಾಮಾಬಾದ್: ಪಠಾಣ್ ಕೋಟ್ ವಾಯು ನೆಲೆಯಲ್ಲಿ ನಡೆದ ದಾಳಿ ಪ್ರಕರಣದ ಸಂಬಂಧ ಸಾಕ್ಷ್ಯಗಳನ್ನು ಸಂಗ್ರಹಿಸಲು ಪಾಕಿಸ್ತಾನ ತನಿಖಾ ತಂಡ ಮಾರ್ಚ್ ನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ.
ವಾಯುನೆಲೆ ಮೇಲಿನ ದಾಳಿಯಲ್ಲಿ ಜೈಶ್-ಇ- ಮೊಹಮ್ಮದ್ ಉಗ್ರ ಸಂಘಟನೆ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಲು ಪಾಕ್ ತನಿಖಾ ತಂಡ ಭಾರತಕ್ಕೆ ಆಗಮಿಸುತ್ತಿದೆ. ಪಾಕ್ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಲಿರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಹಿರಿಯ ರಾಯಭಾರಿಯೊಬ್ಬರು ಡಾನ್ ಪತ್ರಿಕೆಗೆ ತಿಳಿಸಿದ್ದಾರೆ.
ಪಠಾಣ್ ಕೋಟ್ ದಾಳಿ ಬಗ್ಗೆ ತನಿಖೆ ನಡೆಸುತ್ತಿರುವ ಪಾಕ್ ತನಿಖಾ ತಂಡದ ಎಫ್ಐ ಆರ್ ನಲ್ಲಿ ಜೈಶ್- ಇ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಿಲ್ಲ ಎಂಬ ವರದಿಗಳು ಪ್ರಕಟವಾಗಿವೆ. ಆದರೂ ಉಗ್ರ ಸಂಘಟನೆ ಕೈವಾಡದ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಪಾಕ್ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಲಿದ್ದು ಎನ್ಐಎ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತದ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.
Advertisement