
ನವದೆಹಲಿ: ಪ್ರತಿಪಕ್ಷಗಳು ಜೆಎನ್ ಯು ವಿವಾದಕ್ಕೆ ಧರ್ಮ ಹಾಗೂ ಪ್ರಾಂತ್ಯದ ಸಂಬಂಧ ಕಲ್ಪಿಸುತ್ತಿವೆ ಎಂದು ಆರೋಪಿಸಿರುವ ಬಿಜೆಪಿ, ಭಾರತ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ, ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ್ರೋಹ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ, ದೇಶವಿರೋಧಿಗಳನ್ನು ರಕ್ಷಿಸಲು ಪ್ರತಿಪಕ್ಷಗಳು ಅನವಶ್ಯಕವಾಗಿ ಧರ್ಮ ಹಾಗೂ ಪ್ರಾಂತ್ಯದ ಸಂಬಂಧ ಕಲ್ಪಿಸುತ್ತಿವೆ ಎಂದಿದ್ದಾರೆ.
ಜೆಡಿಯು- ಆರ್ ಜೆ ಡಿ- ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ಬಿಹಾರ ರಾಜ್ಯದಲ್ಲಿ ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧನಕ್ಕೊಳಗಾದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೇಶದ್ರೋಹ ಕಾನೂನಿನ ಅಡಿ ಬಂಧನಕ್ಕೊಳಗಾಗಿರುವ 55 ಮಂದಿಗಳ ಪೈಕಿ 28 ಜನರು ಬಿಹಾರದವರು ಎಂದು ಶ್ರೀಕಾಂತ್ ಶರ್ಮಾ ಮಾಹಿತಿ ನೀಡಿದ್ದಾರೆ.
ಏಕತೆ ಮತ್ತು ಸಮಗ್ರತೆಗೆ ಸಂಬಂಧಿಸಿದ ದೇಶ ವಿರೋಧಿ ಘೋಷಣೆಯಂತಹ ಸೂಕ್ಷ್ಮ ವಿಷಯವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಓಮರ್ ಅಬ್ದುಲ್ಲಾ, ಅರವಿಂದ್ ಕೇಜ್ರಿವಾಲ್ ರಾಜಕೀಯಗೊಳಿಸಬಾರದು ಎಂದು ಶ್ರೀಕಾಂತ್ ಶರ್ಮಾ ಮನವಿ ಮಾಡಿದ್ದಾರೆ.
Advertisement