
ಒಡಿಶಾ: ಒಬ್ಬ ಟೀ ಮಾರುವವನು ದೇಶದ ಪ್ರಧಾನಿಯಾಗಿರುವುದನ್ನು ಒಪ್ಪಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಸರ್ಕಾರೇತರ ಸೇವಾ ಸಂಸ್ಥೆಗಳು ಒಟ್ಟಾಗಿ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ಬಯಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಒಡಿಸ್ಸಾದಲ್ಲಿ ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ನಾನು ಪ್ರಯತ್ನಿಸುತ್ತಿರುವ ಕಾರಣ, ನಾನಾ ಶಕ್ತಿಗಳು ಒಂದಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಫೆಮಾ ಕಾಯಿದೆ ಉಲ್ಲಂಘನೆಗಾಗಿ ನಿಷೇಧಕ್ಕೊಳಗಾಗಿರುವ ಎನ್‌ಜಿಒಗಳು ಹಾಗೂ ಕಾಳಸಂತೆಕೋರರು ಒಟ್ಟಾಗಿ ಸಂಚು ರೂಪಿಸಿದ್ದಾರೆ. ಹಗಲಿರುಳೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಸರಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ. ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ,'' ಎಂದು ಮೋದಿ ಆರೋಪಿಸಿದ್ದಾರೆ.
ಇಂತಹ ಗೊಡ್ಡು ಬೆದರಿಕೆಗೆ ಹೆದರಿ ತಲೆ ಬಾಗುವುದಿಲ್ಲ. ಈ ದೇಶವನ್ನು ದೋಚಲು ಎಂದಿಗೂ ಬಿಡುವುದಿಲ್ಲ. ಜನ ನೀಡಿದ ಕೆಲಸ ನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಮೋದಿ ಸವಾಲು ಹಾಕಿದ್ದಾರೆ.
ವಿದೇಶಗಳಿಂದ ದೇಶದ ಸಾವಿರಾರು ಎನ್‌ಜಿಒಗಳಿಗೆ ಭಾರಿ ಹಣ ಹರಿದುಬರುತ್ತಿದೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಎಷ್ಟು ಹಣ ಬಂತು ಎಂಬ ಲೆಕ್ಕ ಕೊಡಿ ಎಂದು ಕೇಳಿದ್ದಕ್ಕೆ ಎನ್‌ಜಿಒಗಳು ತಿರುಗಿಬಿದ್ದಿವೆ. ಲೆಕ್ಕದ ಬಗ್ಗೆ ನಾವು ಪ್ರಶ್ನಿಸಿದಾಗಿನಿಂದಲೂ ಅವರ ಪಾಲಿಗೆ ನಾವು ಶತ್ರಗಳಾಗಿದ್ದೇವೆ. ಎನ್‌ಜಿಒಗಳೆಲ್ಲ ಸೇರಿ 'ಮೋದಿಗೆ ಹೊಡೆಯಿರಿ' (ಮೋದಿ ಕೊ ಮಾರೊ) ಎಂದು ಕೂಗಾಡುತ್ತಿವೆ. ಅವರು ಲೆಕ್ಕ ಕೊಡಬೇಕಾದದ್ದು ಕಾನೂನು. ಅದರಂತೆ ನಡೆಯಿರಿ ಎಂದು ನಾವು ಹೇಳಿದ್ದೇ ತಪ್ಪಾಯಿತೇ?,'' ಎಂದು ಅವರು ಪ್ರಶ್ನಿಸಿದ್ದಾರೆ.
Advertisement