
ನವದೆಹಲಿ: ದೇಶವಿರೋಧಿ ಘೋಷಣೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಹಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರತಿಪಕ್ಷ ಸದಸ್ಯರು ಸಂಸತ್ ನಲ್ಲಿ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗ್ರಹಿಸಿದ್ದಾರೆ.
ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಹುಲ್ ಗಾಂಧಿ ದೇಶವನ್ನು ಒಡೆಯುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶವಿರೋಧಿ ಹೇಳಿಕೆಗಳನ್ನು ಸಹಿಸಬೇಕೋ ಬೇಡವೋ ಎಂಬುದರ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಯುತ್ತಿದೆ. ಅಫ್ಜಲ್ ಗುರುವನ್ನು ಬೆಂಬಲಿಸಿ, ಭಾರತವನ್ನು ಒದೇಯುವುದಾಗಿ ಘೋಷಣೆ ಕೂಗಿದವರು ದೇಶದ್ರೋಹಿಗಳು ಹೌದೋ ಅಲ್ಲವೋ ಎಂದು ವಿಶೇಷವಾಗಿ ಕಾಂಗ್ರೆಸ್ ಗೆ ಕೇಳಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.
"ರಾಹುಲ್ ಗಾಂಧಿಯವರೇ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶವಿರೋಧಿಗಳನ್ನು ಬೆಂಬಲಿಸುವ ಮಟ್ಟಕ್ಕೆ ಇಳಿಯಬೇಡಿ, ಸಾವಿರಾರು ಹುತಾತ್ಮರಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ, ನೀವು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶವನ್ನು ಒಡೆಯುವವರಿಗೆ ಬೆಂಬಲ ಸೂಚಿಸುತ್ತಿದ್ದೀರಿ" ಎಂದು ಅಮಿತ್ ಶಾ ಎಚ್ಚರಿಸಿದ್ದಾರೆ.
Advertisement