ಲೋಕಸಭೆಯಲ್ಲಿ ರೋಹಿತ್ ವೆಮುಲಾ ಪ್ರಕರಣ: ಭಾವುಕರಾದ ಸ್ಮೃತಿ ಇರಾನಿ, ವಿಪಕ್ಷಗಳ ವಿರುದ್ಧ ವಾಗ್ದಾಳಿ
ನವದೆಹಲಿ: ಸಂಸತ್ ಅಧಿವೇಶನದ ಲೋಕಸಭಾ ಕಲಾಪದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಚರ್ಚೆಯಾಗಿದ್ದು, ವಿಪಕ್ಷಗಳ ಆರೋಪಕ್ಕೆ ಸ್ಮೃತಿ ಇರಾನಿ ಉತ್ತರ ನೀಡಿದ್ದಾರೆ.
"ಹೈದರಾಬಾದ್ ವಿವಿಗೆ ಪತ್ರ ಬರೆದದ್ದು ನನ್ನ ಕರ್ತವ್ಯದ ಭಾಗವಾಗಿ. ವಿದ್ಯಾರ್ಥಿಗಳ ಹಲವು ಸಮಸ್ಯೆಗಳನ್ನು ಧರ್ಮ, ಜಾತಿಗಳನ್ನು ಲೆಕ್ಕಿಸದೇ ಬಗೆಹರಿಸಿದ್ದೇನೆ, ಎಂದಿಗೂ ಜಾತಿ ರಾಜಕೀಯ ಮಾಡಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ ಆದ್ದರಿಂದ ಕ್ಷಮೆ ಕೋರುವುದಿಲ್ಲ ಎಂದು ಸ್ಮೃತಿ ಇರಾನಿ ಸ್ಪಷ್ಟಪಡಿಸಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ ಭಾವುಕರಾದ ಸ್ಮೃತಿ ಇರಾನಿ, ವಿರೋಧ ಪಕ್ಷಗಳು ನನ್ನ ಪ್ರತಿಕ್ರಿಯೆ ಕೇಳಲು ಸಿದ್ಧವಿಲ್ಲ ಎಂದು ಆರೋಪಿಸಿದ್ದಾರೆ. "ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಲಾಗಿದೆ. ಪೊಲೀಸರು ಬರುವುದಕ್ಕೂ ಮುನ್ನವೇ ರೋಹಿತ್ ವೇಮುಲನ ದೇಹವನ್ನು ಕೆಳಗಿಳಿಸಲಾಗಿತ್ತು. ಘಟನಾ ಸ್ಥಳದಲ್ಲಿದ್ದವರು ವೈದ್ಯರಿಗೂ ಪ್ರವೇಶ ನೀಡದೆ ರೋಹಿತ್ ವೇಮುಲಾ ಬದುಕಿದ್ದನೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಬಿಡಲಿಲ್ಲ, ಅವಕಾಶ ನೀಡಿದ್ದರೆ ಆತ ಬದುಕುಳಿಯುವ ಸಾಧ್ಯತೆ ಇತ್ತು. ಆದರೆ ಅಲ್ಲಿದ್ದವರಿಗೆ ಆತ ಬದುಕುವುದು ಬೇಡವಾಗಿತ್ತು, ರಾಜಕೀಯ ಮಾಡಬೇಕಿತ್ತು" ಎಂದು ತೆಲಂಗಾಣ ಪೊಲೀಸ್ ವರದಿಯನ್ನು ಉಲ್ಲೇಖಿಸಿರುವ ಸ್ಮೃತಿ ಇರಾನಿ ಹೇಳಿದ್ದಾರೆ.
ರೋಹಿತ್ ಸಾವಿನ ಪ್ರಕರಣವನ್ನು ರಾಹುಲ್ ಗಾಂಧಿ ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ. ತೆಲಂಗಾಣ ವಿಚಾರದಲ್ಲಿ ನಡೆದ ಹೋರಾಟದಲ್ಲಿ 600 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು, ಆಗ ರಾಹುಲ್ ಗಾಂಧಿ ಭೇಟಿ ನೀಡಿರಲಿಲ್ಲ. ರೋಹಿತ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಕಾರಣಗಳಿಗಾಗಿಯೇ ಕ್ಯಾಂಪಸ್ ಭೇಟಿ ನೀಡಿದ್ದರು ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ