ನವದೆಹಲಿ: ದೆಹಲಿಯ ಜವಾಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರು ಪರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರನ್ನು ಮತ್ತೊಂದು ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
ಜೆಎನ್ ಯುನ ಆವರಣದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸುತ್ತಿದ್ದಂತೆಯೇ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಇನ್ನಿತರ ವಿದ್ಯಾರ್ಥಿಗಳು ತಲೆಮರೆಸಿಕೊಂಡಿದ್ದರು. ಫೆಬ್ರವರಿ 24ರಂದು ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ತಡರಾತ್ರಿ ದೆಹಲಿ ಪೊಲೀಸರ ಬಳಿ ಶರಣಾಗಿದ್ದರು.
ಇಬ್ಬರು ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಬೇಕಾಗಿದೆ. ಹಾಗಾಗಿ, ಪೊಲೀಸ್ ಕಸ್ಟಡಿ ವಿಸ್ತರಿಸಿ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಮತ್ತೊಂದು ದಿನ ಇಬ್ಬರು ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿದೆ.
ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಫೆ. 9ರಂದು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಶಂಕಿಸಿ ಉಮರ್ ಖಾಲೀದ್, ಅನಂತ್ ಪ್ರಕಾಶ್ ನಾರಾಯಣ್, ಅಶುತೋಷ್ ಕುಮಾರ್, ರಾಮನಾಗ ಮತ್ತು ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು.