ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡನೆ

ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ರಂಜೀತ್ ರಂಜನ್...
ರಾಜ್ಯಸಭೆಯ ಹೊರಗೆ ಕಲಾಪದ ನಂತರ ಕಂಡ ಸಚಿವೆ ಸ್ಮೃತಿ ಇರಾನಿ.
ರಾಜ್ಯಸಭೆಯ ಹೊರಗೆ ಕಲಾಪದ ನಂತರ ಕಂಡ ಸಚಿವೆ ಸ್ಮೃತಿ ಇರಾನಿ.

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ರಂಜೀತ್ ರಂಜನ್ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ನಿನ್ನೆ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು 2016-17ನೇ ಸಾಲಿನ ಬಜೆಟ್ ಮಂಡಿಸಲು ಆರಂಭಿಸುವ ಸ್ವಲ್ಪ ಹೊತ್ತಿಗೆ ಮುಂಚೆ ನಿಲುವಳಿ ಸೂಚನೆ ಮಂಡಿಸುವಂತೆ ಕಾಂಗ್ರೆಸ್ ಸದಸ್ಯರು ಸೂಚನೆ ನೀಡಿ ಗದ್ದಲವೆಬ್ಬಿಸಿದ್ದರು.

ಸ್ಮೃತಿ ಇರಾನಿಯವರು ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಕುರಿತಂತೆ ಅಹಂಕಾರದ ಮಾತುಗಳನ್ನಾಡಿದ್ದು, ಸದನದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಿಲುವಳಿ ಸೂಚನೆ ಮಂಡಿಸಿದ್ದಾರೆ.

ಸ್ಮೃತಿ ಇರಾನಿಯವರು ಸದನದಲ್ಲಿ ಹೇಳಿದ್ದು ಸಂಪೂರ್ಣ ಸುಳ್ಳು ಎಂದು ರೋಹಿತ್ ನ ತಾಯಿ ಮತ್ತು ಕುಟುಂಬದವರು, ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ಅವರ ಮಿತ್ರರೇ ಹೇಳಿದ್ದಾರೆ.  ಹಾಗಿರುವಾಗ ಅವರಿಗೆ ಯಾಕೆ ಅಷ್ಟೊಂದು ಸಿಟ್ಟು? ತಮಗೆ ಸಿಕ್ಕಿರುವ ಮಾಹಿತಿ ತಪ್ಪಾಗಿದೆ ಎಂದು ಅವರು ಒಪ್ಪಿಕೊಳ್ಳುತ್ತಿದ್ದರೆ ನಾವು ಈ ವಿಷಯವನ್ನು ಇಲ್ಲಿಗೇ ಬಿಡುತ್ತಿದ್ದೆವು. ಆದರೆ ಅವರು ಅಧಿಕಾರದಲ್ಲಿದ್ದಾರೆ ಎಂಬ ಮಾತ್ರಕ್ಕೆ ಸಿಟ್ಟು, ಅಹಂಕಾರ ತೋರಿಸಿದರೆ ನಾವು ಸುಮ್ಮನಿರುವುದಿಲ್ಲ. ಈ ಅಹಂಕಾರವೇ ಅವರನ್ನು ಕೆಳಗಿಳಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪಿ.ಎಲ್. ಪುಣಿಯಾ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

 ಮೊನ್ನೆ ಸಂಸತ್ತಿನಲ್ಲಿ ಭಾಷಣ ಮಾಡಿದ್ದ ಸಚಿವೆ ಸ್ಮೃತಿ ಇರಾನಿ, ತಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ತೆಲಂಗಾಣ ಹೈಕೋರ್ಟ್ ಗೆ ಸಲ್ಲಿಸಿದ ವರದಿ ಪ್ರಕಾರ, ಪೊಲೀಸರು ರೋಹಿತ್ ನ ಹಾಸ್ಟೆಲ್ ಗೆ ರಾತ್ರಿ 7.20ರ ಹೊತ್ತಿಗೆ ತಲುಪಿದ್ದರು. ಆಗ ಅವರು ರೋಹಿತ್ ನ ಶವ ನೋಡಿದ್ದಾರೆ. ನಾವು ಹಾಸ್ಟೆಲ್ ಗೆ ತಲುಪುವ ಹೊತ್ತಿಗೆ ರೋಹಿತ್ ವೇಮುಲನ ಕೋಣೆ ತೆರೆದಿತ್ತು, ಅಲ್ಲೇ ಇದ್ದ ಟೇಬಲ್ ಬಳಿ ರೋಹಿತ್ ನ ಶವ ಬಿದ್ದಿತ್ತು. ಅಲ್ಲೊಂದು ಕೈ ಬರಹದಲ್ಲಿ ಬರೆದ ಡೆತ್ ನೋಟ್ ಸಿಕ್ಕಿತ್ತು. ಅದರಲ್ಲಿ ಯಾರೊಬ್ಬರ ಮೇಲೆ ಕೂಡ ಆಪಾದನೆ ಮಾಡಿರಲಿಲ್ಲ. ವೈದ್ಯರನ್ನು ಕೂಡ ಮೃತದೇಹದ ಹತ್ತಿರ ಪರೀಕ್ಷೆ ನಡೆಸಲು ಬಿಡಲಿಲ್ಲ. ಬದಲಾಗಿ ರೋಹಿತ್ ವೇಮುಲನ ಸಾವಿನ ವಿಷಯವನ್ನು ರಾಜಕೀಯ ಮಾಡಿದರು. ಮರುದಿನ ಮುಂಜಾನೆ 6.30ರವರೆಗೂ ಪೊಲೀಸರನ್ನು ಕೂಡ ಒಳಗೆ ಬಿಟ್ಟಿರಲಿಲ್ಲ. ಎಂದು ಪೊಲೀಸರ ವರದಿ ತಿಳಿಸುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com