ನವದೆಹಲಿ: ತಮ್ಮ ಕೊನೆಯ ದೆಹಲಿ ವಾರ್ಷಿಕ ಸಮ್ಮೇಳನದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು, ‘ಅದೃಷ್ಟವಶಾತ್ ದೆಹಲಿ ಪೊಲೀಸ್ ಇಲಾಖೆ ದೆಹಲಿ ಸರ್ಕಾರದ ಅಧೀನದಲ್ಲಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ದೆಹಲಿ ಮುಖ್ಯಮಂತ್ರಿಯೇ ಪೊಲೀಸರನ್ನು ನಿಯಂತ್ರಿಸುತ್ತಿದ್ದಲ್ಲಿ, ಸ್ಥಳೀಯ ವಿಚಾರಗಳಲ್ಲೂ ರಾಜಕೀಯ ಮೂಗು ತೂರಿಸುತ್ತಿದ್ದರು ಎಂದು ಬಸ್ಸಿ ಆರೋಪಿಸಿದ್ದಾರೆ.
ಇದೇ ವೇಳೆ ದೆಹಲಿ ಪೊಲೀಸ್ ಇಲಾಖೆಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿಲ್ಲ. ಸ್ಥಳೀಯ ವಿಷಯಗಳಲ್ಲಿ ಅವರು ಮಧ್ಯಪ್ರವೇಶಿಸುವುದಿಲ್ಲ ಎಂದು ಬಸ್ಸಿ ಸ್ಪಷ್ಟಪಡಿಸಿದರು.
ಬಹುತೇಕ ರಾಜ್ಯ ಸರ್ಕಾರಗಳಲ್ಲಿ ಸಾಮಾನ್ಯವಾಗಿ ಪೊಲೀಸ್ ಇಲಾಖೆಯು ಅಲ್ಲಿನ ಸ್ಥಳೀಯ ವಿಷಯಗಳಲ್ಲಿ ರಾಜಕೀಯ ಒತ್ತಡ ಎದುರಿಸಬೇಕಾಗುತ್ತದೆ. ಆದರೆ ದೆಹಲಿ ವಿಚಾರದಲ್ಲಿ ಮಾತ್ರ ಇದು ವಿಭಿನ್ನ ಎಂದು ಅವರು ಹೇಳಿದ್ದಾರೆ.