ಪಠಾಣ್ ಕೋಟ್ ಸುತ್ತಮುತ್ತ ಮುಂದುವರಿದಿರುವ ಯೋಧರ ಕಾರ್ಯಾಚರಣೆ( ಫೋಟೋ ರಾಯ್ ಟರ್ಸ್)
ಪಠಾಣ್ ಕೋಟ್ ಸುತ್ತಮುತ್ತ ಮುಂದುವರಿದಿರುವ ಯೋಧರ ಕಾರ್ಯಾಚರಣೆ( ಫೋಟೋ ರಾಯ್ ಟರ್ಸ್)

ಪಠಾಣ್ ಕೋಟ್: ಅಪರಿಚಿತ ಶವ ಆರನೇ ಉಗ್ರನದ್ದೆಂಬ ಶಂಕೆ

ಇಲ್ಲಿನ ವಾಯುನೆಲೆ ಹತ್ತಿರ ಸಿಕ್ಕಿದ ಅಪರಿಚಿತ ವ್ಯಕ್ತಿಯ ಶವ ಆರನೇ ಉಗ್ರನದ್ದಾಗಿರಬಹುದೆಂದು, ಆತ ನಿನ್ನೆ ( ಸೋಮವಾರ) ನಡೆದ...
Published on

ಪಠಾಣ್ ಕೋಟ್ : ಇಲ್ಲಿನ ವಾಯುನೆಲೆ ಹತ್ತಿರ ಸಿಕ್ಕಿದ ಅಪರಿಚಿತ ವ್ಯಕ್ತಿಯ ಶವ ಆರನೇ ಉಗ್ರನದ್ದಾಗಿರಬಹುದೆಂದು, ಆತ ನಿನ್ನೆ ( ಸೋಮವಾರ) ನಡೆದ ಮಿಲಿಟರಿ ಕಾರ್ಯಾಚರಣೆ ವೇಳೆ ಯೋಧರಿಂದ ಹತನಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಇದುವರೆಗೆ ನಡೆದ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಪಡೆ ತಿಳಿಸಿದೆ.ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರಗಾಮಿ ದಾಳಿ ನಂತರದ ಪ್ರಮುಖ ಹತ್ತು ಬೆಳವಣಿಗೆಗಳು ಇಂತಿವೆ.

1. ಆರನೇ ಉಗ್ರಗಾಮಿಯ ಹತ್ಯೆಯನ್ನು ಭದ್ರತಾ ಪಡೆ ಯೋಧರು ಇನ್ನೂ ಖಚಿತಪಡಿಸಿಲ್ಲ. ಸೇನಾ ಕಾರ್ಯಾಚರಣೆ ಅಲ್ಲಿ ಇನ್ನೂ ನಿಂತಿಲ್ಲ. ಆದರೆ ವಾಯುನೆಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಸಾಧ್ಯತೆಗಳು ಕಡಿಮೆ ಎಂದು ಅಧಿಕಾರಿಗಳ ಹೇಳಿಕೆ.
2. ಇಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಮತ್ತು ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರೊಂದಿಗೆ ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡಲಿದ್ದಾರೆ.
3. ರಾಷ್ಟ್ರೀಯ ತನಿಖಾ ದಳದ ಒಂದು ಅಂಗ ಪಠಾಣ್ ಗೆ ತಲುಪಿದ್ದು, ತನಿಖೆಯನ್ನು ಆರಂಭಿಸಿದೆ.
4. ಉಗ್ರರ ದಾಳಿಗೆ ಎರಡು ದಿನಕ್ಕ ಮೊದಲು ಪಂಜಾಬ್ ಪೊಲೀಸ್ ಸೂಪರಿಂಟೆಂಡೆಂಟ್ ಸಲ್ವಿಂದರ್ ಸಿಂಗ್ ಅವರನ್ನು ಅಪಹರಿಸಿ ಅವರ ಕಾರನ್ನು ವಶಪಡಿಸಿಕೊಂಡು ಸೇನಾ ಸಮವಸ್ತ್ರದಲ್ಲಿ ಪಠಾಣ್ ಕೋಟ್ ವಾಯುನೆಲೆಯ ಒಳಗೆ ಪ್ರವೇಶಿಸಿದ್ದರು.
5. ಅವರು ಭಯೋತ್ಪಾದಕರು ಎಂದು ನನಗೆ ತಕ್ಷಣ ಗೊತ್ತಾಯಿತು. ಅವರಲ್ಲಿ ಎಕೆ -47 ಗನ್ ಇತ್ತು, ಅದರಿಂದ ನನ್ನನ್ನು ಶೂಟ್ ಮಾಡುವುದಾಗಿ ಬೆದರಿಸಿದ್ದರು ಎಂದು ಸಲ್ವಿಂದರ್ ಸಿಂಗ್ ವಿವರಿಸುತ್ತಾರೆ.
6. ಉಗ್ರಗಾಮಿಗಳ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ, ವಾಯುನೆಲೆ ಮೇಲೆ ದಾಳಿ ಮಾಡಿದವರು ಆತ್ಮಹತ್ಯಾ ದಳದ ಭಯೋತ್ಪಾದಕರಾಗಿದ್ದು, ಅವರು ನಮ್ಮ ವಾಯುಪಡೆಗೆ ಸೇರಿದ ಸಂಪತ್ತುಗಳನ್ನು ನಾಶಪಡಿಸಲು ಯತ್ನಿಸಿದ್ದರು. ನಮ್ಮ ಸೇನಾ ಯೋಧರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಹಾನಿ ತಪ್ಪಿತು ಎಂದು ಹೇಳುತ್ತಾರೆ.
7. ಆಸಕ್ತಿಕರ ವಿಷಯವೆಂದರೆ ಉಗ್ರರ ಈ ದಾಳಿಯನ್ನು ಪಾಕಿಸ್ತಾನ ಖಂಡಿಸಿದೆ. ಭಯೋತ್ಪಾದನೆಯನ್ನು ಆಮೂಲಾಗ್ರವಾಗಿ ನಾಶಪಡಿಸಬೇಕೆಂಬುದು ಪಾಕಿಸ್ತಾನ ಸರ್ಕಾರದ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಭಾರತದೊಂದಿಗೆ ಸಂಪರ್ಕದಲ್ಲಿದ್ದು, ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಪಾಕ್ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
8. ಉಗ್ರಗಾಮಿಗಳು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶೆ-ಇ-ಮೊಹಮ್ಮದ್ ಸಂಘಟನೆಯವರು ಎಂದು ಶಂಕಿಸಲಾಗಿದ್ದು, ಅವರು ಹೊಸ ವರ್ಷದ ಸಂದರ್ಭದಲ್ಲಿ ಭಾರತದ ಗಡಿಯೊಳಗೆ ನುಸುಳಿರಬಹುದು ಎಂದು ಹೇಳಲಾಗುತ್ತಿದೆ.
9.ಕಳೆದ ಶುಕ್ರವಾರ ಅಥವಾ ಶನಿವಾರ ಪಂಜಾಬ್ ಪ್ರಾಂತ್ಯದ ಭಾರತದ ಗಡಿಯೊಳಗೆ ಪ್ರವೇಶಿಸಿ ಶನಿವಾರ ಮುಂಜಾನೆ ದಾಳಿ ಮಾಡಿರಬಹುದು. ಉಗ್ರರನ್ನು ನಾಶಪಡಿಸುವ ಕಾರ್ಯಚರಣೆ ನಿನ್ನೆ ಕೂಡ ಸಾಗಿತ್ತು.
10. ಮೊನ್ನೆ ನಡೆದ ದಾಳಿಯಲ್ಲಿ ಏಳು ಮಂದಿ ಯೋಧರು ಹತರಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆಯ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಮೊನ್ನೆ ಭಾನುವಾರ ಗ್ರೆನೇಡ್ ನ್ನು ನಾಶಪಡಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದು, ಅವರ ಅಂತ್ಯಸಂಸ್ಕಾರ ಇಂದು ಅವರ ಹುಟ್ಟೂರಾದ ಕೇರಳದ ಪಾಲಕ್ಕಾಡ್ ನಲ್ಲಿ ನೆರವೇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com