ಬೆಂಗಳೂರು: ಮುಂಬೈ ಸರಣಿ ಸ್ಫೋಟದ ಅಪರಾಧಿ, ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಸನ್ನಡತೆ ಆಧಾರದ ಮೇಲೆ ಶಿಕ್ಷೆ ಕಡಿತಗೊಳಿಸಲು ಮಹಾರಾಷ್ಟ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದ್ದು, ದತ್ ಫೆಬ್ರುವರಿ 27ರಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಅವರ ಜೈಲು ಶಿಕ್ಷೆ 2016ರ ಆಗಸ್ಟ್ ನಲ್ಲಿ ಅಂತ್ಯಗೊಳ್ಳಲಿದೆ. ಆದರೆ ಸನ್ನಡತೆ ಆದಾರದ ಮೇಲೆ ಅವರು ಫೆಬ್ರುವರಿಯಲ್ಲೆ ಬಿಡುಗಡೆ ಹೊಂದಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಜಯ್ ದತ್ ಅವರಿಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ವಿಚಾರಣಾಧೀನ ಕೈದಿಯಾಗಿ ಅವರು 18 ತಿಂಗಳು ಜೈಲುವಾಸ ಅನುಭವಿಸಿದ್ದರು.
ಅಪರಾಧಿಯು ತನ್ನ ಜೈಲು ಶಿಕ್ಷೆ ವೇಳೆ ಉತ್ತಮ ನಡತೆ ತೋರಿದರೆ ಅಂಥ ಖೈದಿಗೆ 114 ದಿನಗಳು ಶಿಕ್ಷೆ ಕಡಿಮೆಯಾಗಲಿದೆ.