ಮಾಲ್ಡಾ ಹಿಂಸಾಚಾರ: ಈ ದಾಂಧಲೆಗೆ ಕಾರಣವೇನು?

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗುರುವಾರವೂ ಹಿಂಸಾಚಾರ ಮುಂದುವರಿದಿದೆ. ಕಳೆದ ಭಾನುವಾರ ಇಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರತಿಭಟನಾಕಾರರು...
ಮಾಲ್ಡಾ ಹಿಂಸಾಚಾರದಲ್ಲಿ ಬೆಂಕಿಗಾಹುತಿಯಾದ ವಾಹನ
ಮಾಲ್ಡಾ ಹಿಂಸಾಚಾರದಲ್ಲಿ ಬೆಂಕಿಗಾಹುತಿಯಾದ ವಾಹನ
Updated on
ಮಾಲ್ಡಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗುರುವಾರವೂ ಹಿಂಸಾಚಾರ ಮುಂದುವರಿದಿದೆ. ಕಳೆದ ಭಾನುವಾರ ಇಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರತಿಭಟನಾಕಾರರು ಕಾಲಿಯಾಚಾಕ್ ಪೊಲೀಸ್ ಸ್ಟೇಷನ್‌ಗೆ ಬೆಂಕಿ ಇಟ್ಟು, ಹಲವಾರು ವಾಹನಗಳನ್ನೂ ನಾಶ ಮಾಡಿದ್ದರು.
ಮಾಲ್ಡಾದಲ್ಲಿ ಗಲಭೆಯುಂಟಾಗಲು ಕಾರಣವೇನು? 
ಅಖಿಲ ಭಾರತೀಯ ಹಿಂದೂ ಮಹಾಸಭಾ ನೇತಾರ ಕಮಲೇಶ್ ತಿವಾರಿ ಪ್ರವಾದಿ ಮೊಹಮ್ಮದ್ ಜಗತ್ತಿನ ಮೊದಲ ಸಲಿಂಗಿ ಎಂದು ಹೇಳಿದ್ದರು. ಉತ್ತರಪ್ರದೇಶದ ಸಂಪುಟ ಸಚಿವ ಮತ್ತು ಸಮಾಜವಾದಿ ಪಕ್ಷದ ಹಿರಿಯ ನೇತಾರ ಅಜಂ ಖಾನ್ ಅವರು ಆರೆಸ್ಸೆಸ್ಸ್ ನವರು ಸಲಿಂಗಿಗಳು ಎಂದು ಹೇಳಿದ್ದಕ್ಕೆ ಪ್ರತಿಯಾಗಿ ತಿವಾರಿ ಈ ರೀತಿ ನುಡಿದಿದ್ದರು. ತಿವಾರಿ ಹೇಳಿಕೆಯಿಂದ ರೊಚ್ಚಿಗೆದ್ದ ಮುಸ್ಲಿಂ ಸಂಘಟನೆಯಾದ ಅಂಜುಮನ್ ಅಹ್ಲೆ ಸುನ್ನಾತುಲ್ ಜಮಾತ್ (ಎಜೆಎಸ್) ಕಮಲೇಶ್ ತಿವಾರಿ ವಿರುದ್ಧ ಭಾನುವಾರ ಪ್ರತಿಭಟನಾ ರ್ಯಾಲಿ ನಡೆಸಿದೆ. ಈ ಪ್ರತಿಭಟನಾ ರ್ಯಾಲಿಯಲ್ಲಿದ್ದವರು  ಕಾಲಿಯಾಚಾಕ್ ಪೊಲೀಸ್ ಸ್ಟೇಷನ್‌ಗೆ ಬೆಂಕಿ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಇನ್ನಿತರ ವಾಹನಗಳಿಗೆ ಬೆಂಕಿ ಇಟ್ಟು ನಾಶ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾದವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಕಲಿಯಾಚಾಕ್‌ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 34ನ್ನು ತಡೆದು ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. 
ಈ ಘಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸೊತ್ತು ನಾಶವಾಗಿದೆ. ಮಾಲ್ಡಾದಲ್ಲಿ ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ, ಭಾನುವಾರ ರಾತ್ರಿಯಿಂದ ಇಲ್ಲಿ ಸೆಕ್ಷನ್ 144 ಜಾರಿಯಾಗಿದೆ.
ಹಿಂದೂ ಮನೆಗಳ ಮೇಲೆ ದಾಳಿ
ಬಾಂಗ್ಲಾದೇಶದ ಗಡಿಭಾಗಕ್ಕೆ ತಾಗಿಕೊಂಡಿರುವ ಜಿಲ್ಲೆಯೇ ಮಾಲ್ಡಾ .ಇಲ್ಲಿ ಮುಸ್ಲಿಮರ ಸಂಖ್ಯೆಯೇ ಜಾಸ್ತಿ. ಪ್ರತಿಭಟನೆಯಲ್ಲಿ ನಿರತರಾದವರು ಹಿಂದೂಗಳು ವಾಸವಾಗಿದ್ದ ಪ್ರದೇಶಗಳಿಗೆ ತೆರಳಿ ಅಲ್ಲಿಯೂ ದಾಂಧಲೆ ನಡೆಸಿದ್ದಾರೆ. ಆದರೆ ಅಲ್ಲಿಂದ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 
ಬಿಜೆಪಿ ಆರೋಪವೇನು?
ದಾಂಧಲೆ ಎಬ್ಬಿಸಿದವರಲ್ಲಿ 130 ಮಂದಿ ವಿರುದ್ಧ ಕೇಸು ದಾಖಲಾಗಿದ್ದರೂ ಬುಧವಾರದವರೆಗೆ ಕೇವಲ 9 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 6 ಮಂದಿಯನ್ನು ಕೆಲವೇ ಗಂಟೆಗಳಲ್ಲಿ ಜಾಮೀನು ನೀಡಿ ಬಂಧಮುಕ್ತಗೊಳಿಸಲಾಗಿದೆ. ಇದನ್ನೆಲ್ಲಾ ಗಮನಿಸಿದರೆ  ಮಮತಾ ಬ್ಯಾನರ್ಜಿ ಸರ್ಕಾರ ದಾಂಧಲೆ ನಡೆಸಿದವರನ್ನು ರಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.  ಈ ನಡುವೆ  ಪಶ್ಚಿಮ ಬಂಗಾಳದ ಏಕೈಕ ಬಿಜೆಪಿ ಶಾಸಕ ಶಮಿಕ್ ಭಟ್ಟಾಚಾರ್ಯ ಅವರನ್ನು ಬುಧವಾರ ಬಂಧಿಸಲಾಗಿತ್ತು. ಶಮಿಕ್ ಅವರಿಗೆ ಕಾಲಿಯಾಚಾಕ್ ಭೇಟಿ ನೀಡುವುದಕ್ಕೂ ನಿರ್ಬಂಧ ಹೇರಲಾಯಿತು.
ಏತನ್ಮಧ್ಯೆ, ಕಾಲಿಯಾಚಾಕ್‌ ಪೊಲೀಸ್ ಠಾಣೆಯಲ್ಲಿರುವ ಅಪರಾಧದ ದಾಖಲೆಗಳನ್ನು ನಾಶಪಡಿಸುವುದಕ್ಕೋಸ್ಕರವೇ ಠಾಣೆಗೆ ಬೆಂಕಿಯಿಡಲಾಯಿತು ಎಂದು ಬಿಜೆಪಿ ನೇತಾರ ರಾಹುಲ್ ಸಿನ್ಹಾ ಆರೋಪಿಸಿದ್ದಾರೆ.
ಮಾಲ್ಡಾದಲ್ಲಿರುವ ಕಾಲಿಯಾಚಾಕ್ ಪೊಲೀಸ್ ಸ್ಟೇಷನ್ ಮುಸ್ಲಿಂ ಆಧಿಪತ್ಯವಿರುವ ಸುಜಾಪುರ್ ಪ್ರದೇಶದಲ್ಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಇಲ್ಲಿ ಹೆಚ್ಚುವರಿ ಭದ್ರತಾ ಪಡೆ ಮತ್ತು ಆರ್‌ಎಎಫ್ ಪಡೆಯನ್ನು ನಿಯೋಜಿಸಲಾಗಿದೆ. ಮಾತ್ರವಲ್ಲದೆ, ಮಾಲ್ಡಾ ಹಿಂಸಾಚಾರದ ಬಗ್ಗೆ ವರದಿ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದ್ದಾರೆ.  
ಈ ಹಿಂದೆ ಕಮಲೇಶ್ ತಿವಾರಿ ಅವರನ್ನು ಗಲ್ಲಿಗೇರಿಸಿ ಎಂದು ಸುಮಾರು 1 ಲಕ್ಷದಷ್ಟು ಜನರು ಮುಜಾಫರ್‌ನಗರದಲ್ಲಿ ಸೇರಿ ಒತ್ತಾಯಿಸಿದ್ದರು. ಅವಹೇಳನಾಕಾರಿ ಭಾಷಣದ ಆರೋಪದಲ್ಲಿ ತಿವಾರಿ ಈಗ ಜೈಲಿನಲ್ಲಿದ್ದಾರೆ.
ಜನವರಿ 18 ರಂದು ಮಾಲ್ಡಾಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಭೇಟಿ ನೀಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com