
ಕೋಲ್ಕೊತ: ಪಾಕ್ ಗಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಾರ್ಯಕ್ರಮವನ್ನು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
2016ರ ಐಸಿಸಿ ವಿಶ್ವ ಟಿ-20 ಪಂದ್ಯಾವಳಿಗಾಗಿ ಇದೇ ಜನವರಿ 15ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣವನ್ನು ಐಸಿಸಿ ತಂಡ ಪರೀಕ್ಷಿಸಲಿದೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣವು ಐಸಿಸಿ ವಿಶ್ವ ಟಿ-20 ಕ್ರಿಕೆಟ್ ಕೂಟದ ಫೈನಲ್ ಪಂದ್ಯದ ತಾಣವಾಗಿದ್ದು ಅದಕ್ಕೆ ಮುನ್ನ ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಅಂಗಣದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಧಕ್ಕೆ ಉಂಟಾಗಿ ಫೈನಲ್ ಪಂದ್ಯವು ಬೇರೆಡೆಗೆ ಸ್ಥಳಾಂತರಗೊಳ್ಳುವ ಅಪಾಯವಿದೆ ಎಂದು ಗಂಗೂಲಿ ಎಚ್ಚರಿಸಿದ್ದಾರೆ.
ಪಾಕ್ ಗಜಲ್ ಗಾಯ ಗುಲಾಂ ಅಲಿ ಅವರ ಸಂಗೀತ ಕಾರ್ಯಕ್ರಮ ಈ ಮೊದಲು ಮುಂಬಯಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಶಿವಸೇನೆ ಬೆದರಿಕೆ ಒಡ್ಡಿದ್ದರಿಂದಾಗಿ ಆ ಕಾರ್ಯಕ್ರಮ ರದ್ದಾಗಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತದಲ್ಲಿ ಗುಲಾಂ ಅಲಿ ಅವರ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ ಗುಲಾ ಅಲಿ ಸಂಗೀತ ಕಾರ್ಯಕ್ರಮ ನಡೆಸುವುದಕ್ಕೆ ಅನುಮತಿ ನೀಡುವಂತೆ ಕೋರಿತ್ತು.
ಆದರೆ ಇಲ್ಲಿ ಐಸಿಸಿ ವಿಶ್ವ ಟಿ-20 ಪಂದ್ಯಾವಳಿಯ ಫೈನಲ್ ಪಂದ್ಯ ನಡೆಯಲಿರುವುದರಿಂದ ಅದಕ್ಕೆ ಮುಂಚಿತವಾಗಿ ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಎಂದು ಸಿಎಬಿ ಅಧ್ಯಕ್ಷ ಗಂಗೂಲಿ ಸ್ಪಷ್ಟ ಪಡಿಸಿದ್ದಾರೆ.
Advertisement