ನವದೆಹಲಿ: ಭಾರತ ಗಡಿ ಭಾಗದಿಂದಾಚೆಗೆ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡಲು ಸಹಾಯ ಮಾಡುತ್ತಿದ್ದ ಬಿಎಸ್‌ಎಫ್ ಯೋಧ ಪ್ರೇಮ್ ಸಿಂಗ್ ಎಂಬವರನ್ನು ಅಪರಾಧ ತನಿಖಾ ದಳ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ವಾರದ ಹಿಂದೆಯಷ್ಟೇ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಶ್ರೀಗಂಗಾನಗರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅನಿಲ್ ಕುಮಾರ್ ಎಂಬ ಯೋಧನನ್ನು ಬಂಧಿಸಲಾಗಿತ್ತು. ಅನಿಲ್ ಕುಮಾರ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರಾಜಸ್ತಾನದ ಬಾರ್ಮರ್‌ನಲ್ಲಿ 72 ಬೆಟಾಲಿಯನ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿರುವ ಪ್ರೇಮ್ ಸಿಂಗ್ ರಜೆಯಲ್ಲಿ ತಾರ್ನ್ ತಾರನ್ ನಲ್ಲಿರುವ ಮನೆಗೆ ಹೋಗಿದ್ದ ವೇಳೆ ಅವರನ್ನು ಬಂಧಿಸಲಾಗಿದೆ.
ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ ಗುರುಜಂತ್ ಸಿಂಗ್, ಸಂದೀಪ್ ಸಿಂಗ್ ಮತ್ತು ಜತಿಂದರ್ ಸಿಂಗ್ ಎಂಬವರಿಗೆ ಗಡಿಯಿಂದಾಚೆ ಕಳ್ಳ ಸಾಗಾಣಿಕೆ ಮಾಡಲು ಪ್ರೇಮ್ ಸಿಂಗ್ ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಪ್ರೇಮ್ ಸಿಂಗ್ ಅವರಿಂದ ಮೊಬೈಲ್ ಫೋನ್ ಮತ್ತು ಪಾಕಿಸ್ತಾನದ ಸಿಮ್ ಕಾರ್ಡ್‌ಗಳಳನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.