
ನವದೆಹಲಿ: ಅಮೆಜಾನ್ ಅಧ್ಯಕ್ಷ ಜೆಫ್ರಿ ಪಿ ಬೆಝೋಸ್ ಅವರನ್ನು ವಿಷ್ಣು ದೇವರ ರೀತಿಯಲ್ಲಿ ತನ್ನ ಜನವರಿ ಸಂಚಿಕೆಯ ಮುಖಪುಟದಲ್ಲಿ ಚಿತ್ರಿಸಿರುವ ಫಾರ್ಚುನ್ ನಿಯತಕಾಲಿಕೆಯ ನಿರ್ಧಾರ ಹಲವು ಹಿಂದೂ ಸಮುದಾಯದವರಿಗೆ ನೋವುಂಟು ಮಾಡಿದೆ.
ನಿಯತಕಾಲಿಕೆಯ ಮುಖಪುಟ ಲೇಖನದಲ್ಲಿ 'ಅಮೆಜಾನ್ ಇನ್ವೇಡ್ಸ್ ಇಂಡಿಯಾ'( ಅಮೆಜಾನ್ ಭಾರತದ ಮೇಲೆ ಆಕ್ರಮಣ) ಶೀರ್ಷಿಕೆ ನೀಡಲಾಗಿದ್ದು, ಭಾರತದ ಮಾರುಕಟ್ಟೆ ಮೇಲೆ ಅಮೆಜಾನ್ ತನ್ನ ಪ್ರಾಬಲ್ಯವನ್ನು ಮೆರೆಯಲು ಹೇಗೆ ಪ್ರಯತ್ನಿಸುತ್ತಿದೆ ಎಂಬ ಬಗ್ಗೆ ವಿವರಿಸಲಾಗಿದೆ.
ಹಿಂದೂ ಧರ್ಮದ ಯುನಿವರ್ಸಲ್ ಸೊಸೈಟಿಯ ಅಧ್ಯಕ್ಷ ರಾಜನ್ ಝೆಡ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣುವಿಗೆ ಗೌರವದ ಸ್ಥಾನವಿದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ವಿಷ್ಣುವನ್ನು ಪೂಜಿಸುತ್ತಾರೆ. ಹಾಗಿರುವಾಗ ಅನುಚಿತವಾಗಿ ವಿಷ್ಣು ದೇವರ ಹೆಸರನ್ನು ಬಳಸಿಕೊಳ್ಳುವುದು ಅಥವಾ ನಾಟಕೀಯ ರೂಪದಲ್ಲಿ ಕಾಲ್ಪನಿಕ ರೂಪ ನೀಡುವುದು ಸರಿಯಲ್ಲ ಎನ್ನುತ್ತಾರೆ.
ಹಿಂದೂ ಧರ್ಮವನ್ನು ಯಾರು ಬೇಕಾದರೂ ತಮ್ಮ ಸ್ವಾರ್ಥಕ್ಕಾಗಿ ಇಷ್ಟಬಂದಂತೆ ಬಳಸಿಕೊಳ್ಳುವುದು ಸರಿಯಲ್ಲ, ಮಾನವನೊಬ್ಬನನ್ನು ದೇವರಿಗೆ ಹೋಲಿಸುವುದು ಧರ್ಮಕ್ಕೆ ವಿರುದ್ಧವಾದುದು ಎನ್ನುತ್ತಾರೆ ಅವರು.
ಫಾರ್ಚುನ್ ನಿಯತಕಾಲಿಕೆ ಈ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಹಕ್ಕುತ್ಯಾಗದ ಬಗ್ಗೆ ಪ್ರಕಟಿಸಿ ಮುಂದಿನ ಸಂಚಿಕೆಯಲ್ಲಿ ವಿಷ್ಣು ದೇವರ ಮತ್ತು ಹಿಂದೂ ಧರ್ಮದ ಬಗ್ಗೆ ಸರಿಯಾದ ವಿವರಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹಿಂದೂ ಧರ್ಮ ವಿಶ್ವದಲ್ಲಿ ಅತ್ಯಂತ ಹಳೆಯ ಮತ್ತು ಮೂರನೇ ಅತಿ ದೊಡ್ಡ ಧರ್ಮವಾಗಿದೆ. ಸುಮಾರು ಒಂದು ದಶಲಕ್ಷ ಮಂ ದಿ ಹಿಂದೂ ಧರ್ಮದ ಅನುಯಾಯಿಗಳಿದ್ದು ಶ್ರೀಮಂತ ತಾತ್ವಿಕ ಚಿಂತನೆಯನ್ನು ಹೊಂದಿದೆ. ಇದನ್ನು ನಿಷ್ಪ್ರಯೋಜಕವಾಗಿ ನೋಡಲು ಸಾಧ್ಯವಿಲ್ಲ. ಯಾವುದೇ ನಂಬಿಕೆಯನ್ನಾಗಲಿ, ಅದು ದೊಡ್ಡದಿರಲಿ, ಸಣ್ಣದಿರಲಿ ಅದನ್ನು ಅಪಹಾಸ್ಯ ಮಾಡಬಾರದು ಎಂದು ಜೆಡ್ ಪ್ರತಿಪಾದಿಸಿದ್ದಾರೆ.
ಫಾರ್ಚುನ್ ನಿಯತಕಾಲಿಕೆಯ ಮುಖಪುಟವನ್ನು ಸಚಿತ್ರಕಾರನಾದ ನಿಗೆಲ್ ಬ್ಯೂಕ್ಯಾನನ್ ನ ವಿನ್ಯಾಸದಂತೆ ಸಿಡ್ನಿ ರಚಿಸಿದೆ.
Advertisement