
ನವದೆಹಲಿ: ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿರುವ ಸಮ - ಬೆಸ ವಾಹನ ನಿಯಮವು ನಾಗರಿಕರ ಬೆಂಬಲದಿಂದ ಅದ್ಭುತ ಯಶಸ್ಸು ಕಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಇಂಗ್ಲೀಷ್ ದೈನಿಕವೊಂದಕ್ಕೆ ಬರೆದಿರುವ ಲೇಖನದಲ್ಲಿ ಅವರು ಈ ಬಗ್ಗೆ ವಿವರಿಸಿದ್ದು, ನಮ್ಮ ದೇಶದ ಮಹಾನಗರಗಳಲ್ಲಿನ ವಾಯು ಮಾಲಿನ್ಯ ದಟ್ಟಣೆಯನ್ನು ಕಡಿಮೆ ಮಾಡಲು ದೆಹಲಿಯ ಸಮ-ಬೆಸ ವಾಹನ ನಿಯಮವನ್ನು ಜಾರಿಗೆ ತರಬಹುದು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವು ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಸಮ-ಬೆಸ ವಾಹನ ನಿಯಮದ ಯಶಸ್ಸಿನಿಂದಾಗಿ ಆಪ್ ಸರಕಾರ ಜನರಿಗೆ ಉತ್ತಮ ಆಡಳಿತ ನೀಡಲು ಶಕ್ತವಿದೆ ಎಂಬುದು ಸಾಬೀತಾಗಿದೆ ಎಂದು ಕೇಜ್ರಿವಾಲ್ ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ, ನಿಯಮಗಳಿಲ್ಲ ಎಂದು ನಾವು ದೂರುತ್ತೇವೆ. ಅದೇ ಸಿಂಗಾಪುರ, ಬ್ರಿಟನ್, ಜಪಾನ್, ಅಮೆರಿಕ ಮೊದಲಾದ ದೇಶಗಳಲ್ಲಿ ಉತ್ತಮ ಆಡಳಿತ, ಜೀವನ ಶೈಲಿ ಮತ್ತು ನಗರ ನೈರ್ಮಲ್ಯವಿದೆ ಎಂದು ಕೊಂಡಾಡುತ್ತೇವೆ. ಅಲ್ಲಿನ ಜನರ ಜೀವನಶೈಲಿ, ಶಿಸ್ತನ್ನು ಮೈಗೂಡಿಸಿಕೊಂಡರೆ ನಾವೂ ಅಲ್ಲಿನ ತರಹ ಸಾಧಿಸಬಹುದು. ಆಮ್ ಆದ್ಮಿ ಸರಕಾರ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ' ಎಂದು ಅರವಿಂದ ಕೇಜ್ರಿವಾಲ್ ಬರೆದಿದ್ದಾರೆ.
ಸಮ-ಬೆಸ ವಾಹನ ಪ್ರಾಯೋಗಿಕ ನಿಯಮ ಇದೇ 15ಕ್ಕೆ ಮುಕ್ತಾಯಗೊಳ್ಳುತ್ತದೆ.
Advertisement