
ನವದೆಹಲಿ: ನಮ್ಮ ದೇಶಕ್ಕೆ ನೋವುಂಟು ಮಾಡಿದವರಿಗೆ ನೋವು ನೀಡಿ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ''ನಾವು ಯಾವುದೇ ಕೆಲಸವನ್ನು ಮಾಡಲು ಸಿದ್ಧ'' ಎಂದು ಹೇಳಿದ್ದಾರೆ. ಆದರೆ ರಕ್ಷಣಾ ಸಚಿವರ ಹೇಳಿಕೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ನಮಗೆ ಯಾರು ತೊಂದರೆ, ನೋವು ಉಂಟುಮಾಡಿದ್ದಾರೆಯೋ ಅವರಿಗೆ ಕೂಡ ನೋವಿನ ಅರಿವು ಆಗಬೇಕು. ಸಮಯ ಮತ್ತು ಸ್ಥಳ ನಮ್ಮ ಆಯ್ಕೆಯಾಗಿರಬೇಕು ಎಂದು ಹೇಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ ಮುಖ್ಯಸ್ಥರು ''ನಮ್ಮಲ್ಲಿ ಸಹಕಾರ ಮತ್ತು ಹೊಂದಾಣಿಕೆಗೆ ಕೊರತೆಯಿಲ್ಲ. ಪಠಾಣ್ ಕೋಟ್ ಕಾರ್ಯಾಚರಣೆ ವೇಳೆ ಸೈನಿಕರ ನಡುವೆ ಸಹಕಾರದ ಲೋಪವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೇನೆಯ ಒಳಗೆ ಆಂತರಿಕ ಸಹಕಾರ ಮತ್ತು ಸಮನ್ವಯತೆ ಕೊರತೆಯಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ವಾಯುನೆಲೆಯನ್ನು ಸ್ವಚ್ಛಗೊಳಿಸಲು ಮೂರು ದಿನಗಳು ಬೇಕಾಯಿತು. ಆಗ ಯೋಧರು ತೋರಿದ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ವಾಯುನೆಲೆಯ ಒಳಗೆ ಇಬ್ಬರು ಸೈನಿಕರು ಇದ್ದಾಗ ಇಬ್ಬರು ಭಯೋತ್ಪಾದಕರು ಒಳಗೆ ಸೇರಿಕೊಂಡುಬಿಟ್ಟಿದ್ದರು. ಸೈನಿಕರನ್ನು ಮೊದಲು ರಕ್ಷಿಸಿ ನಂತರ ಉಗ್ರಗಾಮಿಗಳ ಮೇಲೆ ಆಕ್ರಮಣ ಮಾಡಬೇಕಾಗಿತ್ತು. ಅದು ಅಷ್ಟು ಸುಲಭವಾಗಿರಲಿಲ್ಲ. ನಾವು ಸಮಯ ತೆಗೆದುಕೊಂಡು ಹೆಚ್ಚಿನ ಸಾವು-ನೋವನ್ನು ತಡೆದೆವು ಎನ್ನುತ್ತಾರೆ ಜನರಲ್ ಸುಹಾಗ್.
ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಯಲು ಭದ್ರತೆ ಕೊರತೆಯೇ ಕಾರಣ ಎಂದು ಸರ್ಕಾರದ ಕಡೆಯಿಂದ ಮತ್ತು ಸಾರ್ವಜನಿಕರಿಂದ ವ್ಯಾಪಕ ಟೀಕೆ ಕೇಳಿಬಂದಿತ್ತು.
Advertisement