
ಮುಂಬಯಿ: ಕಳೆದ 8 ವರ್ಷಗಳ ಹಿಂದೆ ಸಂರಕ್ಷಿಸಿ, ಶೈತ್ಯಾಗಾರದಲ್ಲಿ ಇಟ್ಟಿದ್ದ ತಮ್ಮ ಅಂಡಾಣುಗಳನ್ನು ಬಳಸಿಕೊಂಡು ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ಮಾಜಿ ಮಿಸ್ ವರ್ಲ್ಡ್ ಡಯಾನಾ ಹೇಡನ್ ಮಗು ಪಡೆದಿದ್ದಾರೆ.
42 ವರ್ಷದ ಮಾಜಿ ವಿಶ್ವ ಸುಂದರಿ ಡಯಾನಾ ಹೇಡನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವೃತ್ತಿ ಬದುಕಿನ ಒತ್ತಡದಲ್ಲಿ ಆ ಸಮಯಕ್ಕೆ ಸರಿಯಾಗಿ ಮಗುವನ್ನು ಪಡೆಯಲು ಸಾಧ್ಯವಾಗದ ಮಹಿಳೆಯರು ಇಂಥ ಪ್ರಯತ್ನ ಮಾಡಬಹುದು ಎಂಬುದನ್ನು ಡಯಾನಾ ತೋರಿಸಿಕೊಟ್ಟಿದ್ದಾರೆ.
40 ವರ್ಷದ ನಂತರ ಮಕ್ಕಳನ್ನು ಪಡೆಯಲು ಬಯಸುವ ಮಹಿಳೆಯರು ತಮ್ಮ 30 ರಿಂದ 35 ವರ್ಷದ ಒಳಗೆ ಈ ತಂತ್ರಜ್ಞಾನವನ್ನು ಉಪಯೋಗಿಸಿ, ತಮ್ಮ 42 ನೇ ವಯಸ್ಸಿನ ನಂತರ ತಾಯಿಯಾಗಬಹುದು.
ಬೇಕೆಂದಾಗ ಮಗು ಪಡೆಯುವ ತಂತ್ರಜ್ಞಾನದ ಬಗ್ಗೆ ಡಯಾನಾ ಓದಿದ್ದರು. ಹೀಗಾಗಿ ಡಯಾನಾ ಹೇಡನ್ 32 ವರ್ಷ ವಯಸ್ಸು ಇದ್ದಾಗ, ಅಂದರೆ 2005ರಲ್ಲಿ ಅಂಡಾಣುಗಳನ್ನು ಶೈತ್ಯಾಗಾರದಲ್ಲಿಟ್ಟಿದ್ದರು, 2007ರ ಅಕ್ಟೋಬರ್‌ನಿಂದ 2008ರ ಮಾರ್ಚ್‌ವರೆಗೆ 16 ಅಂಡಾಣುಗಳನ್ನು ವೈದ್ಯೆ ಡಾ. ನಂದಿತಾ ಪಾಲ್‌ಶೇಟ್ಕರ್ ಬಳಿ ಶೈತ್ಯೀಕರಣ ಸ್ಥಿತಿಯಲ್ಲಿ ಸಂಗ್ರಹಿಸಿಟ್ಟಿದ್ದರು.
ಅಂಡಾಣು ಶೈತ್ಯಿಕರಣ ತಂತ್ರಕ್ಷಾನವನ್ನು ತಮ್ಮ ಪತಿ ಡಾ. ಹೃಷಿಕೇಶ ಪೈ ಭಾರತಕ್ಕೆ ಪರಿಚಯಿಸಿದರು ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಪಾಲ್‌ಶೇಟ್ಕರ್ ಹೇಳಿದ್ದಾರೆ. ಈ ವಿಧಾನವನ್ನು ವಿಟ್ರಿಫಿಕೇಷನ್ ಟೆಕ್ನಾಲಜಿ ಎಂದು ಕರೆಯುತ್ತಾರೆ.
ಎಂಡೋಮೆಟ್ರಿಯೋಸಿಸ್ ಎಂಬ ತೊಂದರೆ ಅನುಭವಿಸುತ್ತಿದ್ದ ಹೇಡನ್ ಅವರಿಗೆ ಸಕಾಲದಲ್ಲಿ ಮಗು ಪಡೆಯದಿದ್ದರೆ, ಭವಿಷ್ಯದಲ್ಲಿ ಗುಣಮಟ್ಟದ ಅಂಡಾಣು ಸಿಗುವುದು ಕಷ್ಟವಿತ್ತು.
ಎರಡು ವರ್ಷಗಳ ಹಿಂದೆ ಅಮೆರಿಕದ ಕಾಲಿನ್ ಡಿಕ್ ಅವರನ್ನು ವಿವಾಹವಾಗಿದ್ದ ಹೇಡನ್ ಜನವರಿ 9 ರಂದು ಮಗುವಿಗೆ ಆರ್ಯ ಹೇಡನ್ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Advertisement