ಕೆಲಸದ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ: ಆರ್ ಬಿಐ ಗೌರ್ನರ್ ರಘುರಾಮ್ ರಾಜನ್
ಮುಂಬೈ: ನಿಮ್ಮ ಕೆಲಸದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಳ್ಳಿ, ಕಡಿಮೆ ಆಡಳಿತಶಾಹಿ ಇರಲಿ, ಸಿಬ್ಬಂದಿಗಳ ಮಧ್ಯೆ ಹೊಂದಾಣಿಕೆ, ಸಂವಹನ, ಹೊಸತನಕ್ಕೆ ತೆರೆದುಕೊಳ್ಳುವ ಮನೋಭಾವವಿರಲಿ. ಇದು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ತಮ್ಮ ಸಿಬ್ಬಂದಿಗೆ ಹೇಳಿದ ಹಿತವಚನ.
ಭಾರತದ ಸೆಂಟ್ರಲ್ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ 81 ವರ್ಷವಾಗಿದೆ. ಆರ್ ಬಿಐ ಅಂದ ತಕ್ಷಣ ಟೀಕೆ, ವಿಮರ್ಶೆ ಮಾಡುವವರಿಗೆ ಜಡ್ಡು ಕಟ್ಟಿದ ಸಂಸ್ಥೆ ಎಂಬ ಭಾವನೆ ಬರುತ್ತದೆ. ಕ್ರಿಯಾತ್ಮಕ ಬುದ್ಧಿವಂತ ಒಂದು ಸಂಸ್ಥೆ ಎಂದು ಅನ್ನಿಸುವುದಿಲ್ಲ ಎಂದು ರಘುರಾಮ್ ರಾಜನ್ ಅವರು ತಮ್ಮ 17 ಸಾವಿರ ಸಿಬ್ಬಂದಿಗೆ ಬರೆದ ಮೆಮೋದಲ್ಲಿ ವಿವರಿಸಿದ್ದಾರೆ ಎಂದು ರಾಯ್ ಟರ್ಸ್ ವರದಿ ಮಾಡಿದೆ.
'' ನಮ್ಮ ನಿಯಮಗಳು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ. ಆರ್ ಬಿಐಯ ನಿಯಮಗಳು ನಮ್ಮ ಸಿಬ್ಬಂದಿಗೇ ಕೆಲವೊಮ್ಮೆ ತಿಳಿದಿರುವುದಿಲ್ಲ ಮತ್ತು ಗ್ರಾಹಕರಿಗೆ ಸಹಾಯ ಮಾಡುವ ಮನೋಭಾವನೆ ಕೂಡ ಇರುವುದಿಲ್ಲ. ಗ್ರಾಹಕರಿಗೆ ಸಿಬ್ಬಂದಿ ನೀಡುವ ಸ್ಪಂದನೆ ಕೆಲವೊಮ್ಮೆ ತೀರಾ ನಿಧಾನವಾಗಿರುತ್ತದೆ ಮತ್ತು ಅಧಿಕಾರಶಾಹಿಯಾಗಿರುತ್ತದೆ'' ಎಂದು ಹೇಳಿದ್ದಾರೆ.
ನಾವು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದು ಕಡಿಮೆ. ಯಾರು ದುರ್ಬಲರು ಮತ್ತು ಚಿಕ್ಕವರಾಗಿರುತ್ತಾರೆಯೋ ಅವರ ವಿರುದ್ಧ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿರುವ ಗವರ್ನರ್ ಅವರು, ಸಿಬ್ಬಂದಿ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ತಮ್ಮ ದಕ್ಷತೆ, ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ.
ಆರ್ ಬಿಐಯಲ್ಲಿ ಕೆಲಸ ಮಾಡುವವರು ತಮ್ಮ ಕೆಲಸವನ್ನು ಹೊರತುಪಡಿಸಿ ಹೊರಜಗತ್ತನ್ನೂ ನೋಡಬೇಕು. ಹೊಸ ಹೊಸ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಆರ್ಥಿಕ ತಜ್ಞರೂ ಆಗಿರುವ ರಾಜನ್ ತಮ್ಮ ಸಹೋದ್ಯೋಗಿ ಸಿಬ್ಬಂದಿಗೆ ಸಲಹೆ ನೀಡಿದರು.
ಆರ್ ಬಿಐಯಲ್ಲಿ, ಕೆಲಸದಲ್ಲಿ ರೋಚಕತೆ ಮೂಡಬೇಕಾದರೆ ಸಿಬ್ಬಂದಿಯ ಮನೋಧರ್ಮ ಬದಲಾಗಬೇಕು. ಕೇಂದ್ರ ಬ್ಯಾಂಕಿನ ಗುಣಮಟ್ಟವನ್ನು ಹೆಚ್ಚಿಸಲು ಸಂಶೋಧನೆ ಕೈಗೊಳ್ಳಲು ಹೊರಗಿನಿಂದ ಜನರನ್ನು ನೇಮಿಸಿಕೊಳ್ಳಬೇಕು ಎಂಬ ಯೋಜನೆ ಅವರದ್ದು.
ಆರ್ ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ಮೂರು ವರ್ಷಗಳ ಅವಧಿ ಸೆಪ್ಟೆಂಬರ್ ಗೆ ಮುಕ್ತಾಯಗೊಳ್ಳುತ್ತದೆ. ಮತ್ತೆ ಎರಡು ವರ್ಷ ಅವರೇ ಮುಂದುವರಿಯುತ್ತಾರೆಯೇ ಎಂದು ಕಾದು ನೋಡಬೇಕಿದೆ. ನಮ್ಮ ದೇಶದ ಕರೆನ್ಸಿ, ಸಾಲ ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ವಲಯ ಬ್ಯಾಂಕುಗಳು ಆರ್ ಬಿಐ ನಿಯಂತ್ರಣದಲ್ಲಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ