ಕಾಮಿಡಿ ನೈಟ್ಸ್ ವಿತ್ ಕಪಿಲ್' ನಟ ಕಿಕು ಶಾರ್ದಾ ಬಿಡುಗಡೆ

ಸ್ವಯಂ ಘೋಷಿತ ದೇವಮಾನವ ಬಾಬಾ ಹಾಗೂ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಕುರಿತು ವಿವಾದಾತ್ಮಕ ಮಿಮಿಕ್ರಿ...
ಕಿಕು ಶಾರ್ದಾ
ಕಿಕು ಶಾರ್ದಾ
ನವದೆಹಲಿ: ಸ್ವಯಂ ಘೋಷಿತ ದೇವಮಾನವ ಬಾಬಾ ಹಾಗೂ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಕುರಿತು ವಿವಾದಾತ್ಮಕ ಮಿಮಿಕ್ರಿ ಮಾಡಿ ಬುಧವಾರ ಬಂಧನಕ್ಕೊಳಗಾಗಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಪ್ರಮುಖ ನಟ ಕಿಕು ಶಾರ್ದಾ ಅವರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಕುರಿತಂತೆ ಮಿಮಿಕ್ರಿ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಿಕು ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಫತೆಬಾದ್ ಪೊಲೀಸರು ಕಿಕು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನಟನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸಂಜೆ ವೇಳೆಗೆ ಕೈತಾಲ್ ಕೋರ್ಟ್ ನಿಂದ ಜಾಮೀನು ಪಡೆದ ಕಿಕು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಇದೆ ಪ್ರಕರಣ ಸಂಬಂಧ ಮತ್ತೆ ಬಂಧಿಸಿದ ಫತೆಬಾದ್ ಪೊಲೀಸರು ವಿಚಾರಣೆ ಬಳಿಕ ಇಂದು ಬಿಡುಗಡೆ ಮಾಡಿದ್ದಾರೆ.
ಈ ಮಧ್ಯೆ ಈ ಬಗ್ಗೆ ಟ್ವೀಟ್ ಮಾಡಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು, ನಾನು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ವಿಷಯ ತಡವಾಗಿ ತಿಳಿಯಿತು. ಕಿಕು ಕ್ರಮದಿಂದಾಗಿ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಆದರೆ ಅವರು ಕ್ಷಮೆಯಾಚಿಸಿದ್ದರೇ ನನ್ನ ಕಡೆಯಿಂದ ಯಾವುದೇ ದೂರು ದಾಖಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಶೈಲಿ ಹಾಗೂ ಹಾವಭಾವಗಳನ್ನು ಅನುಕರಿಸಿ ಕಿಕು ಶಾರದ ಅವರು ಮಿಮಿಕ್ರಿಯೊಂದನ್ನು ಮಾಡಿದ್ದರು. ಇದರ ಕಾರ್ಯಕ್ರಮ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮ ಹಲವು ವಿವಾದಗಳನ್ನು ಹುಟ್ಟುಹಾಕಿತ್ತು. ಕಾರ್ಯಕ್ರಮ ಪ್ರಸಾರದ ನಂತರ ಗುರ್ಮೀತ್ ಅವರ ಅನುಯಾಯಿಗಳು, ಕಿಕು ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂದು ಪ್ರಕರಣವೊಂದನ್ನು ದಾಖಲಿಸಿದ್ದರು. ನಂತರ ತಮ್ಮ ನಟನೆ ಕುರಿತಂತೆ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದ ಕಿಕು ಅವರು, ಯಾರಿಗೂ ನೋವುಂಟು ಮಾಡುವ ಹಾಗೂ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆಂದು ಹೇಳಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com