

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಿಂದ ಇಲ್ಲಿಯವರೆಗೂ ಸ್ವಪಕ್ಷ ನಾಯಕರ ಕಾಲೆಳೆದು, ಹಲವು ವಿವಾದಾತ್ಮಕ ಹೇಳಿಕೆ ನೀಡಿ, ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ, ಸಂಸದ ಶತೃಘ್ನ ಸಿನ್ಹಾ, ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.
ಪಾಕಿಸ್ತಾನ ಸೇರಿದಂತೆ ನೆರೆ ರಾಷ್ಟ್ರಗಳ ಜೊತೆ ಉತ್ತಮವಾದ ಬಾಂಧವ್ಯ ವೃದ್ಧಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿರುವ ಶತೃಘ್ನ ಸಿನ್ಹಾ, ಪ್ರಧಾನ ನರೇಂದ್ರ ಮೋದಿ ಅವರ ರಚನಾತ್ಮಕ ವಿದೇಶಾಂಗ ನೀತಿಗಳು ನೆರೆಹೊರೆಯ ರಾಷ್ಟ್ರಗಳ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಲು ಸಹಾಯವಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ಡೈನಾಮಿಕ್, ಹಾಗೂ ಒಳ್ಳೆಯ ಉದ್ದೇಶ ಹೊಂದಿರುವ ಆಕ್ಷನ್ ಹೀರೋ ಎಂದು ಹಾಡಿ ಹೊಗಳಿರುವ ಶತೃಘ್ನ ಸಿನ್ಹಾ, ಪ್ರಧಾನಿ ಅವರ ಎಲ್ಲಾ ಒಳ್ಳೆಯ ಕೆಲಸ ಕಾರ್ಯಗಳಿಗೂ ದೇಶದ ಜನ ಒಟ್ಟಾಗಿ ಅವರಿಗೆ ಬೆಂಬಲ ನೀಡಲು ಕರೆ ನೀಡಿದ್ದಾರೆ.