
ನವದೆಹಲಿ: ಸಮ-ಬೆಸ ಸಂಖ್ಯೆ ಸೂತ್ರದ ಯಶಸ್ಸಿನ ಬಗ್ಗೆ ರ್ಯಾಲಿಯೊಂದರಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಮಹಿಳೆಯೊಬ್ಬರು ಮಸಿ ಬಳಿದಿದ್ದಾರೆ.
ದೆಹಲಿಯ ಚತ್ರಸಾಲ್ ಸ್ಟೇಡಿಯಂ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದ ಕೇಜ್ರಿವಾಲ್ ಮೇಲೆ ಭದ್ರತೆಯನ್ನು ಉಲ್ಲಂಘಿಸಿದ ಮಹಿಳೆಯೊಬ್ಬರು ಕೇಜ್ರಿವಾಲ್ ಮೇಲೆ ಮಸಿ ಹಾಗೂ ಪೇಪರ್ ತುಂಡುಗಳನ್ನು ಎರಚಿದ್ದಾರೆ.
ಅಚ್ಚರಿಯೆಂದರೆ ಮಸಿ ಬಳಿದ ಮಹಿಳೆ ಭಾವನ ಪಂಜಾಬ್ ನ ಆಮ್ ಆದ್ಮಿ ಘಟಕದ ಕಾರ್ಯಕರ್ತೆಯಾಗಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಎನ್ ಜಿ ಹಗರಣದಲ್ಲಿ ಆದ್ಮಿ ಪಕ್ಷದವರು ಭಾಗಿಯಾಗಿದ್ದು ಇದರ ಬಗ್ಗೆ ತಮ್ಮ ಬಳಿ ಸಾಕ್ಷ್ಯ ಇರುವುದಾಗಿ ಮಹಿಳೆ ಹೇಳಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್ ಅವರ ಭದ್ರತೆ ಉಲ್ಲಂಘನೆಯಾಗಿದೆ, ದೆಹಲಿಯ ಇಡೀ ಸಚಿವ ಸಂಪುಟವೇ ಇದ್ದರೂ ಸಾಕಷ್ಟು ಪ್ರಮಾಣದಲ್ಲಿ ಪೊಲೀಸರಿರಲಿಲ್ಲ ಎಂದು ದೂರಿದ್ದಾರೆ. ದೆಹಲಿ ಪೊಲೀಸರು ಬಿಜೆಪಿ ನಿಯಂತ್ರಣದಲ್ಲಿದ್ದು, ಈ ಘಟನೆ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
Advertisement