
ಜೈಪುರ: ಜ.2 ರ ಪಠಾಣ್‌ಕೋಟ್ ಹಾಗೂ 2008ರ ಮುಂಬೈ ದಾಳಿ ಪ್ರಕರಣದ ರೂವಾರಿಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದರಿಂದ ಭಾರತ ತಾಳ್ಮೆ ಕಳೆದುಕೊಳ್ಳುವಂತಾಗಿದೆ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್ ಅವರು ಗುಡುಗಿದ್ದಾರೆ.
ಜೈಪುರದಲ್ಲಿ ಮಾತನಾಡಿದ ಅವರು ಭಾರತ ತಾಳ್ಮೆ ಕಳೆದುಕೊಂಡರೇ ಅದರ ಪರಿಣಾಮಗಳನ್ನು ಮುಂದಿನ ಒಂದು ವರ್ಷದಲ್ಲಿ ಇಡೀ ಜಗತ್ತು ನೋಡಲಿದೆ ಎಂದರು. ದಾಳಿಯಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ, ನಮ್ಮ ತಾಳ್ಮೆ ಮೀರಿದೆ. ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
'ರಕ್ಷಣ ಸಚಿವನಾಗಿ ನನ್ನ ತಾಳ್ಮೆಗೆ ಮಿತಿ ಇದೆ. ಇನ್ನೂ ಸಹಿಸಲಾಗದು. ಜೆಇಎಂ ಸಂಘಟನೆಯನ್ನು ಮಟ್ಟ ಹಾಕಿ ಅದರ ಸದಸ್ಯರನ್ನು ಪಾಕಿಸ್ತಾನ ಬಂಧಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಏನು ಮಾಡಬೇಕು ಎಂಬುದು ತಿಳಿದಿದೆ. ನಮ್ಮ ಸರದಿಗಾಗಿ ಕಾಯುತ್ತಿದ್ದೇವೆ. ದೇಶದ ಶತ್ರುಗಳನ್ನು ಹೇಗೆ ಮಟ್ಟ ಹಾಕಬೇಕೆಂದು ನಮಗೂ ತಿಳಿದಿದೆ. ಎಲ್ಲವನ್ನೂ ವಿವರಗಳನ್ನು ಹಂಚಿಕೊಳ್ಳಲಾಗದು.'ಎಂದಿದ್ದಾರೆ.
ಪಠಾಣ್ ಕೋಟ್ ದಾಳಿ ಸಂಬಂಧ ತನಿಖೆ ನಡೆಸಲು, ಪಾಕಿಸ್ತಾನ ಉನ್ನತ ಮಟ್ಟದ ತನಿಖಾ ತಂಡ ನೇಮಿಸಿದೆ. ಈ ತಂಡ ತನಿಖೆ ನಡೆಸಲು ಪಠಾಣ್ ಕೋಟ್ ಗೆ ಬಂದರೆ ವಾಯುನೆಲೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪರ್ರಿಕರ್ ಹೇಳಿದ್ದಾರೆ.
Advertisement