
ನವದೆಹಲಿ: ಏರ್ ಇಂಡಿಯಾದ ಸ್ಟೇಷನ್ ಮ್ಯಾನೇಜರ್ ಒಬ್ಬರ ಕಪಾಳಕ್ಕೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಿಥುನ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಮಿಥುನ್ ರೆಡ್ಡಿ ಅವರನ್ನು ಬಂಧಿಸಿದ್ದು, ಇಂದಿನಿಂದ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ನಿನ್ನೆ ಮಧ್ಯಾಹ್ನ ಸಂಸದ ಮಿಥನ್ ರೆಡ್ಡಿ ಅವರು ತಮ್ಮ ಸಂಬಂಧಿಕರೊಂದಿಗೆ ತಿರುಪತಿಯಲ್ಲಿರುವ ಏರ್ ಪೋರ್ಟ್ ಗೆ ಹೋಗಿದ್ದರು. 20-25 ನಿಮಿಷದ ನಂತರ ಮತ್ತೆ ಏರ್ ಪೋರ್ಟ್ ನಿಂದ ಹೊರ ಬರುವಾಗ ಅಲ್ಲಿನ ಸಿಬ್ಬಂದಿಗಳು ಸಂಸದನ ಬಳಿ ಬೋರ್ಡಿಂಗ್ ಪಾಸ್ ಕೇಳಿದ್ದಾರೆ. ಈ ವೇಳೆ ಸಂಸದ ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ.
ನಂತರ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದ ಸಂಸದ ನೇರವಾಗಿ ಏರ್ ಪೋರ್ಟ್ ಮ್ಯಾನೇಜರ್ ರಾಜಶೇಖರ್ ಬಳಿ ಹೋಗಿ ಮಾತನಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸಂಸದ ಮ್ಯಾನೇಜರ್ ಕೆನ್ನೆಗೆ ಹೊಡೆದಿದ್ದಾರೆಂದು ತಿಳಿದು ಬಂದಿತ್ತು. ಘಟನೆಗೆ ಸಂಬಂಧಿಸಿದಂದೆ ರಾಜಶೇಖರ್ ಅವರು ಸಂಸದನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಿಥುನ್ ವಿರುದ್ಧ ಇದೀಗ ಐಪಿಸಿ ಸೆಕ್ಷನ್ 323, 353, ಹಾಗೂ 444ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಮಿಥುನ್ ರೆಡ್ಡಿ, ಆರೋಪವನ್ನು ತಳ್ಳಿ ಹಾಕಿದ್ದರು. ನಾನು ಮ್ಯಾನೇಜರ್ ಗೆ ಹೊಡೆದೇ ಇಲ್ಲ. ಘಟನೆಯೊಂದು ನನ್ನ ವಿರುದ್ಧ ನಡೆಸಿರುವ ಪಿತೂರಿಯಾಗಿದೆ ಎಂದು ಹೇಳಿದ್ದರು.
ಘಟನೆ ವೇಳೆ ಮ್ಯಾನೇಜರ್ ಅವರೇ ನನ್ನ ಮೇಲೆ ದಾಳಿ ಮಾಡಿದ್ದರು. ನನ್ನನ್ನು ನಿಂದಿಸಿದ್ದರು. ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಘಟನೆ ಹಿಂದೆ ಪಿತೂರಿಯಿದೆ. ಘಟನೆ ನಡೆದಿದ್ದು ಮಧ್ಯಾಹ್ನ. ಆದರೆ, ಆತ ರಾತ್ರಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯನ್ನು ಲೋಕಸಭಾ ಸ್ಪೀಕರ್ ಹಾಗೂ ಏರ್ ಇಂಡಿಯಾ ಆಡಳಿತ ಮಂಡಳಿಯ ಬಳಿ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದ್ದರು.
Advertisement