

ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಂಡಾರು ದತ್ತಾತ್ರೇಯ ಕಾರಣ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಿಪಿಐ-ಎಂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.
ಸಿಪಿಐಎಂ ಜರ್ನಲ್ ಪೀಪಲ್ಸ್ ಡೆಮಾಕ್ರಸಿಯಲ್ಲಿ ರೋಹಿತ್ ವೇಮುಲ ಅವರ ಬಗ್ಗೆ ಬರೆಯಲಾಗಿದ್ದು, ಹೈದರಾಬಾದ್ ನ ಉಪಕುಲಪತಿ ಪಿ.ಅಪ್ಪ ರಾವ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ. ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿ ಅವರೊಂದಿಗೆ ಉಪಕುಲಪತಿ ಪಿ.ಅಪ್ಪ ರಾವ್ ಅವರನ್ನೂ ವಜಾಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಬಳಿಕವೂ ಇಬ್ಬರು ಕೇಂದ್ರ ಸಚಿವರನ್ನು ಸ್ಥಾನದಲ್ಲಿ ಮುಂದುವರೆಸುವುದನ್ನು ಒಪ್ಪಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ಇಬ್ಬರೂ ಸಚಿವರನ್ನು ವಜಾಗೊಳಿಸಬೇಕು ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.