ಭಬುವಾ: ಬಿಹಾರದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಐಎಸ್ಐ ಸೇರುವಂತೆ ಪಾಕಿಸ್ತಾನದಿಂದ ಫೋನ್ ಕರೆ ಬಂದಿರುವುದಾಗಿ ಶನಿವಾರ ಬಿಹಾರ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ಮುಖೇಶ್ ಕುಮಾರ್ ಈ ಸಂಬಂಧ ಭಬುವಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಗೆ ಪಾಕಿಸ್ತಾನದಿಂದ ಶುಕ್ರವಾರ ಬಂದ ಫೋನ್ ಕರೆಯೊಂದು ಐಎಸ್ಐ ಸೇರುವಂತೆ ಆಮೀಷ ಒಡ್ಡಿರುವುದಾಗಿ ಹೇಳಿದ್ದಾನೆ.
ಮೊದಲ ಬಾರಿಗೆ ಕರೆ ಮಾಡಿದಾಗ ರಿಸೀವ್ ಮಾಡಲಿಲ್ಲ. 2ನೇ ಬಾರಿಗೆ ಕರೆ ಮಾಡಿದಾಗ ಪ್ರತಿಕ್ರಿಯಿಸಿದೆ. ಆಗ ಐಎಸ್ಐ ಸೇರಿಕೊಂಡರೆ ಕೈತುಂಬ ಹಣ ನೀಡುವುದಾಗಿ ಆಮೀಷ ಒಡ್ಡಿದರು ಎಂದು ಮುಖೇಶ್ ದೂರಿನಲ್ಲಿ ತಿಳಿಸಿದ್ದಾನೆ.
ಮುಖೇಶ್ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ಜತೆಗೆ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದಾನೆ. ಕರೆ ಎಲ್ಲಿಂದ ಬಂದಿದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲು ಗುಪ್ತಚರ ಇಲಾಖೆ ಮತ್ತು ಇತರ ರಕ್ಷಣಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.