

ನವದೆಹಲಿ: ವರ್ಷದ ಪ್ರಥಮ ಮನ್ ಕಿ ಬಾತ್ ನ ಸಂಚಿಕೆಯಲ್ಲಿ ಇತ್ತೀಚೆಗಷ್ಟೆ ಜಾರಿಗೆ ಬಂದಿರುವ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು, ಆ ಮೂಲಕ ಕೇವಲ 2 ವರ್ಷಗಳಲ್ಲಿ ಕನಿಷ್ಠ ಶೇ.50 ರಷ್ಟು ರೈತರು ಯೋಜನೆಯ ಭಾಗವಾಗಬೇಕು ಎಂದು ಹೇಳಿದ್ದಾರೆ. 
ರೈತರು ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೈಸರ್ಗಿಕ ವಿಪತ್ತು ಎದುರಾದಾಗ ಅವರ ಶ್ರಮ ಸಂಪೂರ್ಣ ವ್ಯರ್ಥವಾಗುವ ಸಾಧ್ಯತೆ ಇದ್ದು, ಒಂದು ವರ್ಷ ನಷ್ಟವಾಗುತ್ತದೆ.  ಈ ಸಂಕಷ್ಟದಿಂದ ದೂರವಿರಿಸಿ ಭದ್ರತೆ ನೀಡಲು ಇರುವುದು ಬೆಳೆ ವಿಮಾ ಯೋಜನೆಯ ಮಾರ್ಗವೊಂದೆ ಎಂದು ಮೋದಿ ಹೇಳಿದ್ದಾರೆ. 
ಬೆಳೆ ವಿಮಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಜನರಿಂದ ಗರಿಷ್ಠ ಸಹಾಯ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಪ್ರಧಾನಿಯನ್ನು ಹೊಗಳುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿಲ್ಲ. ಈ ವರೆಗೂ ದೇಶಾದ್ಯಂತ ಶೇ. 20 -25 ಕ್ಕಿಂತ ಹೆಚ್ಚು ರೈತರು ಪ್ರಧಾನಮಂತ್ರಿ ಬೆಲೆ ವಿಮಾ ಯೋಜನೆಯಿಂದ ಪ್ರಯೋಜನ ಪಡೆದಿಲ್ಲ, ಇನ್ನು 2 ವರ್ಷಗಳೊಳಗೆ ದೇಶದ ಶೇ.50 ರಷ್ಟು ರೈತರು ಈ ಯೋಜನೆಯ ಭಾಗವಾಗುವಂತೆ ಮಾಡಲು ಪಣತೊಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
Advertisement