ಪ್ರಾಣಿ ಬಲಿ ಕುರಿತ ಹೇಳಿಕೆ: ಧರ್ಮ ಧಾರ್ಮಿಕ ಮುಖಂಡರಿಗೆ ಹೆದರುವುದಿಲ್ಲ ಎಂದ ಇರ್ಫಾನ್ ಖಾನ್

ಕುರ್ಬಾನಿ ಹೆಸರಿನಲ್ಲಿ ಕುರಿ ಹಾಗೂ ಪ್ರಾಣಿ ಬಲಿ ನೀಡುವುದನ್ನು ಖಂಡಿಸಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಹೇಳಿಕೆಗೆ ಇಸ್ಲಾಮ್ ಧಾರ್ಮಿಕ ಮುಖಂಡರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇರ್ಫಾನ್ ಖಾನ್
ಇರ್ಫಾನ್ ಖಾನ್

ನವದೆಹಲಿ: ಕುರ್ಬಾನಿ ಹೆಸರಿನಲ್ಲಿ ಕುರಿ ಹಾಗೂ ಪ್ರಾಣಿ ಬಲಿ ನೀಡುವುದನ್ನು ಖಂಡಿಸಿ ಪ್ರಾಣಿಗಳನ್ನು ವಾತ್ಯಲ್ಯದಿಂದ ನೋಡುವ ಮೂಲಕ ಕುರ್ಬಾನಿ ಆಚರಿಸಿ ಎಂದು ಕರೆ ನೀಡಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಹೇಳಿಕೆಗೆ ಇಸ್ಲಾಮ್ ಧಾರ್ಮಿಕ ಮುಖಂಡರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಆದರೆ ಧಾರ್ಮಿಕ ಮುಖಂಡರ ಟೀಕೆಗೆ ಹೆದರದ ಇರ್ಫಾನ್ ಖಾನ್ ಇದಕ್ಕೂ ಪ್ರತಿಕ್ರಿಯೆ ನೀಡಿದ್ದು, ಧಾರ್ಮಿಕ ಮುಖಂಡರಿಗೆ ತಾವು ಭಯಪಡುವುದಿಲ್ಲ ಎಂದು ಹೇಳಿದ್ದಾರೆ. " ನಾನು ಧರ್ಮ ಗುರುಗಳು ಆಡಳಿತ ನಡೆಸುತ್ತಿರುವ ದೇಶದಲ್ಲಿ ವಾಸಿಸುತ್ತಿಲ್ಲವಾದ ಕಾರಣ ಅವರಿಗೆ ಹೆದರುವ ಅವಶ್ಯಕತೆ ಇಲ್ಲ. ನನ್ನ ಪ್ರಕಾರ ಧರ್ಮವೆಂದರೆ ಅದು ಆತ್ಮಾವಲೋಕನ, ಸಹಾನುಭೂತಿಗೆ ಮೂಲವೇ ಹೊರತು ಏಕಪ್ರಕಾರವಾಗಿರುವುದು ಹಾಗೂ ಮತಾಂಧತೆಗೆ ಮೂಲವಲ್ಲ ಎಂದು ಇರ್ಫಾನ್ ಖಾನ್ ಹೇಳಿದ್ದಾರೆ.

ತಮ್ಮ "ಮದರಿ' ಚಿತ್ರದ ಬಗ್ಗೆ ಜೈಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಇರ್ಫಾನ್‌ ಖಾನ್‌, ಇಸ್ಲಾಂನಲ್ಲಿರುವ ಬಲಿದಾನ ಮತ್ತು ಉಪವಾಸದ ಕ್ರಮವನ್ನು ಪ್ರಶ್ನಿಸಿ ಕುರ್ಬಾನಿ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ಖಂಡನೀಯ, ಪ್ರಾಣಿ ಬಳಿ ಕೊಡುವ ಮೂಲಕ ಕುರ್ಬಾನಿ ಆಚರಿಸುವ ಬದಲು ಪ್ರಾಣಿಗಳನ್ನು ವಾತ್ಯಲ್ಯದಿಂದ ನೋಡುವ ಮೂಲಕ ಆಚರಿಸಿ ಎಂದು ಕರೆ ನೀಡಿದ್ದರು. ನಾವು ಯಾವುದನ್ನೋ ತ್ಯಜಿಸುತ್ತೇವೆಯೋ ಅದರೊಂದಿಗೆ ನಮಗೆ ನೇರವಾದ ಭಾವನಾತ್ಮಕ ಸಂಬಂಧ ಇರಬೇಕು. ಬಲಿದಾನದ ಹೆಸರಿನಲ್ಲಿ ಆಡು ಅಥವಾ ಕುರಿಯನ್ನು ಕೊಲ್ಲುವುದು ಕೇವಲ ಪ್ರಾಣಿ ಹಿಂಸೆ ಎಂದು ಇರ್ಫಾನ್ ಖಾನ್ ಹೇಳಿದ್ದರು. ಇರ್ಫಾನ್ ಖಾನ್ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಇಸ್ಲಾಮ್ ನ ಧರ್ಮ ಗುರುಗಳು, ಧಾರ್ಮಿಕ ವಿಷಯಗಳ ಕುರಿತು ಗಮನ ಕೇಂದ್ರೀಕರಿಸುವ ಬದಲು ಅವರು ತಮ್ಮ ಕೆಲಸದ ಮೇಲೆ ಗಮನಹರಿಸಲಿ ಎಂದು ಸಲಹೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com