
ಹೈದರಾಬಾದ್: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದೆ ಎನ್ನಲಾಗಿರುವ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಮೂಲಕ ಬಿಜೆಪಿ ಹಿಂದುತ್ವವನ್ನು ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
1.5 ಕೋಟಿ ಉದ್ಯೋಗ ಸೃಷ್ಟಿ, ಅನಿಲ, ಸೀಮೆ ಎಣ್ಣೆಗಳನ್ನು ನಿಯಂತ್ರಣ ಮುಕ್ತಗೊಳಿಸುವುದು, ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದಕ್ಕೆ ವಿಫಲವಾಗಿರುವ ಬಿಜೆಪಿ ಈಗ ಆರ್ ಎಸ್ ಎಸ್ ನ ಪ್ರಮುಖ ಉದ್ದೇಶವಾಗಿರುವ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.
ಈ ಹಿಂದೆಯೂ ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಅಸಾವುದ್ದೀನ್ ಓವೈಸಿ, ಹಿಂದೂ ಅವಿಭಜಿತ ಕುಟುಂಬಗಳ ತೆರಿಗೆ ರಿಯಾಯಿತಿಯನ್ನು ಬಿಟ್ಟುಕೊಡಲು ಸಂಘ ಪರಿವಾರ ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಭಾರತದ ಸಂವಿಧಾನದಲ್ಲಿ 16 ಮಾರ್ಗದರ್ಶಿ ತತ್ವಗಳಿದ್ದು ಮದ್ಯ ನಿಷೇಧವೂ ಅದರಲ್ಲಿ ಸೇರ್ಪಡೆಯಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮದ್ಯ ನಿಷೇಧದ ಬಗ್ಗೆ ಚರ್ಚಿಸಿ, ಅದನ್ನು ಜಾರಿಗೊಳಿಸಬೇಕು ಎಂದು ಓವೈಸಿ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಇದೆ ವೇಳೆ ಎನ್ಐಎ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಯುವಕರಿಗೆ ಕಾನೂನು ನೆರವು ನೀಡುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಓವೈಸಿ, ಒಂದು ವೇಳೆ ಯುವಕರ ಪರವಾಗಿ ನಾನು ವಕೀಲರನ್ನು ನೇಮಕ ಮಾಡದೆ ಇದ್ದರೆ, ಆ ಕೆಲಸವನ್ನು ಕೋರ್ಟ್ ಮಾಡಲಿದೆ, ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆರೋಪಿಗೂ ಕಾನೂನು ಹೋರಾಟ ನಡೆಸಲು ನೆರವು ಸಿಗಲಿದೆ ನಮ್ಮ ನ್ಯಾಯಾಂಗ ವ್ಯವಸ್ಥೆ ಇರುವುದೇ ಹೀಗೆ ಎಂದು ಅಸಾವುದ್ದೀನ್ ಓವೈಸಿ ತಿಳಿಸಿದ್ದಾರೆ.
Advertisement