
ನವದೆಹಲಿ: ಎಲ್ಲಾ ಹುದ್ದೆಗಳು ಮತ್ತು ಸೇವೆಗಳಲ್ಲಿ ಅಂಗವಿಕಲರಿಗೆ ಬಡ್ತಿ ನೀಡುವಾಗ ಶೇ. 3 ರಷ್ಟು ಮೀಸಲಾತಿಯನ್ನು ಪರಿಗಣಿಸಬೇಕು ಎಂಗು ಕೇಂದ್ರ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಆದೇಶಿಸಿದೆ.
ಅಂಗವಿಕಲರಿಗೆ ಬಡ್ತಿ ನೀಡುವುದನ್ನು ಸೀಮಿತಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಹಿಂದಿನ ಆದೇಶವನ್ನು ರದ್ದು ಪಡಿಸಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳು ಮತ್ತು ಸೇವೆಗಳಲ್ಲಿ ಅಂಗವಿಕಲರಿಗೆ ಶೇಕಡಾ 3ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸಿ ಆದೇಶ ನೀಡಿದೆ.
ಬಡ್ತಿ ನೀಡುವಾಗ ಅಂಗವಿಕಲರಿಗೆ ನೀಡಬೇಕಾದ ಮೀಸಲಾತಿಯನ್ನು ಸಿ ಮತ್ತು ಡಿ ಗ್ರೂಪ್ ಹುದ್ದೆಗಳಿಗೆ ಮಾತ್ರ ಮಿತಿಗೊಳಿಸಿ, ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಬಡ್ತಿ ನೀಡುವಾಗ ಅಂಗವಿಕಲರಿಗೆ ಮೀಸಲಾತಿ ನೀಡಬೇಕಿಲ್ಲ ಎಂದು ಸರ್ಕಾರವು ಈ ಹಿಂದೆ ಆದೇಶ ಹೊರಡಿಸಿತ್ತು.
1997 ಮತ್ತು 2005ರಲ್ಲಿ ಹೊರಡಿಸಲಾದ ಆದೇಶಗಳಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೇರ ನೇಮಕಾತಿ ಮತ್ತು ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವಾಗ ತಾರತಮ್ಯ ನೀತಿಯನ್ನು ಹುಟ್ಟುಹಾಕಲಾಗಿತ್ತು.
ಗ್ರೂಪ್ ಎ ಮತ್ತು ಗ್ರೂಪ್ ಬಿ ವರ್ಗದ ಹುದ್ದೆಗಳಿಗೆ ಬಡ್ತಿ ನೀಡುವಾಗ ಯಾವುದೇ ಮೀಸಲಾತಿಯನ್ನು ಪರಿಗಣಿಸಬೇಕಿಲ್ಲ ಎಂದು ಈ ಆದೇಶಗಳಲ್ಲಿ ನಿರ್ದೇಶಿಲಾಗಿತ್ತು. ಬಿ ಮತ್ತು ಸಿ ವರ್ಗದ ಹುದ್ದೆಗಳಿಗೆ ಬಡ್ತಿ ನೀಡುವಾಗ ಮಾತ್ರ ಮೀಸಲಾತಿ ನೀತಿ ಅನುಸರಿಸಿದರೆ ಸಾಕು ಎಂದು ಆದೇಶ ಸೂಚಿಸಿತ್ತು.
ಬಡ್ತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶ ಅಕ್ರಮ ಮತ್ತು ಅಸಮಂಜಸವಾಗಿದೆ. ಅದು 1995ರ ಅಂಗವಿಕಲರ (ಸಮಾನ ಅವಕಾಶಗಳು, ರಕ್ಷಣೆ ಮತ್ತು ಹಕ್ಕುಗಳು) ಕಾಯ್ದೆಯ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ ಮತ್ತು ಅಭಯ್ ಎಂ. ಸಪ್ರೆ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ.
Advertisement