ಚೆನ್ನೈ ಪೊಲೀಸರು ಟೆಕ್ಕಿ ಸ್ವಾತಿ ಕೊಲೆ ಆರೋಪಿ ಪತ್ತೆ ಹಚ್ಚಿದ್ದು ಹೀಗೆ

ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಸ್ವಾತಿ ಎಂಬಾಕೆಯನ್ನು ರೈಲು ನಿಲ್ದಾಣದಲ್ಲಿ ಹಾಡಹಗಲೇ ಕೊಂದ ಸುದ್ದಿ ಇಡೀ ತಮಿಳುನಾಡನ್ನು ಬೆಚ್ಚಿ...
ಸ್ವಾತಿ ಮತ್ತು ಆರೋಪಿ ರಾಂಕುಮಾರ್(ಸಂಗ್ರಹ ಚಿತ್ರ)
ಸ್ವಾತಿ ಮತ್ತು ಆರೋಪಿ ರಾಂಕುಮಾರ್(ಸಂಗ್ರಹ ಚಿತ್ರ)
ಚೆನ್ನೈ: ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಸ್ವಾತಿ ಎಂಬಾಕೆಯನ್ನು ರೈಲು ನಿಲ್ದಾಣದಲ್ಲಿ ಹಾಡಹಗಲೇ ಕೊಂದ ಸುದ್ದಿ ಇಡೀ ತಮಿಳುನಾಡನ್ನು ಬೆಚ್ಚಿ ಬೀಳಿಸಿತ್ತು. ಪೊಲೀಸರಿಗೆ ಆರೋಪಿಯನ್ನು ಹಿಡಿಯುವುದು ಸವಾಲಿನ ವಿಷಯವಾಗಿತ್ತು.

ಆರೋಪಿಯನ್ನು ಹಿಡಿಯಲು ಪೊಲೀಸರು ಆಳವಾದ ತನಿಖೆ ನಡೆಸಿದ್ದರು. ಮನೆಮನೆಗೆ ಹೋಗಿ ವಿಚಾರಣೆ ನಡೆಸಿದ್ದರು. ಕೊನೆಗೆ ರಾಮ್ ಕುಮಾರ್ ನ ರೂಮ್ ಮೇಟ್ ನಟೇಶನ್ ಕೊಟ್ಟ ಸುಳಿವು, ಮಾಹಿತಿ ಪೊಲೀಸರಿಗೆ ನೆರವಾಯಿತು. 

ಅಷ್ಟಕ್ಕೂ ಸ್ವಾತಿ ಕೊಲೆ ನಡೆದದ್ದು ಹೇಗೆ, ಅದರ ಹಿನ್ನೆಲೆ ಏನು ಇಲ್ಲಿದೆ ಸಂಪೂರ್ಣ ಮಾಹಿತಿ: 
ಚೆನ್ನೈನ ನುಂಗಂಬಕ್ಕಂ ರೈಲ್ವೆ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಸ್ವಾತಿ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಅನೇಕ ಅಡ್ಡಿ-ಆತಂಕಗಳು ಎದುರಾದವು. ಸಾರ್ವಜನಿಕರ ಎದುರೇ ಸ್ವಾತಿಯ ಕೊಲೆ ನಡೆದು 72 ಗಂಟೆಗಳು ಕಳೆದಿತ್ತು. ಪೊಲೀಸರು ಇದ್ದಬದ್ದ ಸುಳಿವು, ಮಾಹಿತಿಗಳನ್ನು ಕಲೆಹಾಕಿ ರೇಖಾಚಿತ್ರ ಬಿಡುಗಡೆ ಮಾಡಿದಾಗ ಸಿಕ್ಕಿದ ಸುಳಿವು ಆರೋಪಿ ಕೊಲೆ ಮಾಡಿದಾಗ ಗೆರೆ ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಎಂಬುದು. 
ಅಂದು ಜೂನ್ 24, ಬೆಳಗ್ಗೆ 6.35ರ ಸಮಯ. ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿ ಎಂದಿನಂತೆ ಅಂದು ಕೂಡ ತನ್ನ ವಾಸ್ತವ್ಯದ ಹತ್ತಿರದ ನುಂಗಂಬಕ್ಕಮ್ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಾಳೆ. ಆಗ ಪ್ಲಾಟ್ ಫಾರ್ಮ್ ಸಂಖ್ಯೆ 2ರಲ್ಲಿ ಒಬ್ಬ ಯುವಕ ಆಕೆಗಾಗಿ ಕಾಯುತ್ತಿರುತ್ತಾನೆ. ಸ್ವಾತಿಯನ್ನು ಕಂಡಾಗ ಹತ್ತಿರಕ್ಕೆ ಬರುತ್ತಾನೆ. ಇಬ್ಬರ ಮಧ್ಯೆ ಜಗಳವಾಗುತ್ತದೆ. ಆಗ ಯುವಕ ತನ್ನಲ್ಲಿದ್ದ ಕತ್ತಿಯಿಂದ ಸ್ವಾತಿಗೆ ತಿವಿದು 6.45ರ ಹೊತ್ತಿಗೆ ಅಲ್ಲಿಂದ ಹೊರಟುಹೋಗುತ್ತಾನೆ. ಅದುವೇ ಅಲ್ಲಿದ್ದವರು ಅವನನ್ನು ಕೊನೆ ಬಾರಿಗೆ ನೋಡಿದ್ದು.

 ಈ ಕೊಲೆ ಕೇಸನ್ನು ಚೆನ್ನೈ ನಗರ ಪೊಲೀಸರು ವಿಚಾರಣೆಗೆ ಕೈಗೆತ್ತಿಕೊಂಡಿದ್ದು ಜೂನ್ 27ಕ್ಕೆ. 
ಸರ್ಕಾರಿ ರೈಲ್ವೆ ಪೊಲೀಸರು ಎರಡು ಸಿಸಿಟಿವಿ ತುಣುಕುಗಳನ್ನು ಬಿಡುಗಡೆ ಮಾಡುತ್ತಾರೆ. ಅದರಲ್ಲಿ ಶಂಕಿತ ಆರೋಪಿ ಬಿಳಿ ಮತ್ತು ಹಸಿರು ಗೆರೆಯುಳ್ಳ ಶರ್ಟನ್ನು ಧರಿಸಿದ್ದು, ಬೆನ್ನಿನಲ್ಲೊಂದು ಬ್ಯಾಗನ್ನು ಏರಿಸಿಕೊಂಡು ನಡೆದುಕೊಂಡು ಹೋಗುತ್ತಿರುವಂತೆ ಕಂಡುಬಂದಿದೆ. ಆದರೆ ಸಾರ್ವಜನಿಕರು ಯಾರೂ ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ತುಣುಕಿಗೆ ಪ್ರತಿಕ್ರಿಯಿಸಲಿಲ್ಲ. ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಾರೂ ಮುಂದೆ ಬರಲಿಲ್ಲ.

ಆರೋಪಿಯ ಬಗ್ಗೆ ಮೊದಲು ಸುಳಿವು ನೀಡಿದ್ದು ಸ್ವಾತಿಯ ಸ್ನೇಹಿತ ಮೊಹಮ್ಮದ್ ಬಿಲಾಲ್. ಒಬ್ಬ ಯುವಕ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಮೊಹಮ್ಮದ್ ಗೆ ಹೇಳಿದ್ದಳಂತೆ ಸ್ವಾತಿ. ಸ್ವಾತಿ ಕೆಲಸ ಮಾಡುತ್ತಿದ್ದ ಇನ್ಫೋಸಿಸ್ ಕಂಪೆನಿಯಿದ್ದ ಮಹಿಂದ್ರಾ ಸಿಟಿಯ ಹತ್ತಿರದ ರೈಲ್ವೆ ನಿಲ್ದಾಣವಾದ ಪರನೂರಿನಲ್ಲಿ ಆತನನ್ನು ನೋಡಿದ್ದೆ ಎಂದು ಸ್ವಾತಿ ಹೇಳಿದ್ದಳು ಎಂದು ಮೊಹಮ್ಮದ್ ಪೊಲೀಸರಿಗೆ ತಿಳಿಸಿದ್ದ. ಇದು ಆಗಿದ್ದು ಜೂನ್ 11ರಂದು.

ಅದಾಗಿ ಒಂದು ವಾರ ಕಳೆದ ನಂತರ ಜೂನ್ 16ರಂದು, ಯುವಕ ಸ್ವಾತಿ ಹತ್ತಿದ ರೈಲಿಗೇ ಹತ್ತಿದ್ದಾನೆ. ಅವಳ ಜೊತೆ ನುಂಗಂಬಕ್ಕಮ್ ನಿಂದ ಪರನೂರಿಗೆ ರೈಲಿನಲ್ಲಿ ಹೋಗಿದ್ದಾನೆ. ಮತ್ತೆ ಜೂನ್ 18ರಂದು ಅದೇ ರೀತಿ ರೈಲಿನಲ್ಲಿ ಪ್ರಯಾಣಿಸಿದ್ದಾನೆ. 

ಇಷ್ಟೆಲ್ಲ ವಿವರಗಳನ್ನು ಮೊಹಮ್ಮದ್ ಬಿಲಾಲ್ ಪೊಲೀಸರಿಗೆ ನೀಡಿದರೂ ಕೂಡ ಆರೋಪಿಯನ್ನು ಪತ್ತೆಹಚ್ಚುವ ಭರವಸೆ ಇನ್ನೂ ಬಂದಿರಲಿಲ್ಲ. ನುಂಗಂಬಕ್ಕಂ, ಮಹೀಂದ್ರಾ ಸಿಟಿ, ಪರನೂರು ಈ ಮೂರೂ ಪ್ರದೇಶಗಳ ಮೊಬೈಲ್ ಟವರ್ ಗೆ ಯಾವೆಲ್ಲಾ ಕರೆಗಳು ಬಂದಿವೆ, ಹೊರ ಹೋಗಿವೆ ಎಂದೆಲ್ಲಾ ಮೊಬೈಲ್ ದಾಖಲೆಗಳನ್ನು ತೆಗೆದು ಪರಿಶೀಲಿಸಿದರು. ಸ್ವಾತಿ ಮತ್ತು ಆರೋಪಿ ಕೊನೆ ಬಾರಿ ಭೇಟಿಯಾದ ಸಮಯವನ್ನು ಪರಿಶೀಲಿಸಿದರು. ಆದರೂ ಪೊಲೀಸರಿಗೆ ಸುಳಿವು ಸಿಗಲಿಲ್ಲ. ಈ ಹೊತ್ತಿಗೆ 5 ಲಕ್ಷಕ್ಕೂ ಹೆಚ್ಚು ಕರೆಗಳು ಈ ಸಮಯದಲ್ಲಿ ಬಂದಿದ್ದವು ಮತ್ತು ಹೊರ ಹೋಗಿದ್ದವು. ಅವುಗಳನ್ನು ಹೋಲಿಕೆ ಮಾಡುವುದು ಕಷ್ಟವಾಗಿತ್ತು.

ಕೊನೆಗೂ ಪೊಲೀಸರು ಈ ಸಮಯದಲ್ಲಿ ಹೆಚ್ಚಾಗಿ ಮಾಡಿದ 48 ಮೊಬೈಲ್ ಕರೆಗಳನ್ನು ಶಾರ್ಟ್ ಲೀಸ್ಟ್ ಮಾಡಿದರು.ಈ ಕರೆಗಳನ್ನು ಯಾರೆಲ್ಲಾ ಮಾಡಿದ್ದಾರೆ ಎಂದು ಪತ್ತೆಹಚ್ಚಲು ಪೊಲೀಸರು ಆರಂಭಿಸಿದರು. ಅದರಲ್ಲಿ ಒಂದು ತಮಿಳುನಾಡಿನ ದಕ್ಷಿಣ ಭಾಗದ ವಿಳಾಸವನ್ನು ಹೊಂದಿತ್ತು. ಆದರೆ ಟವರ್ ನ ದಾಖಲೆಗಳ ಪ್ರಕಾರ ಆ ವ್ಯಕ್ತಿ ಚೂಲೈಮೆಡು ಎಂಬಲ್ಲಿದ್ದಾನೆಂದು ಗೊತ್ತಾಯಿತು. ಅದು ಸ್ವಾತಿ ಉಳಿದುಕೊಂಡಿದ್ದ ಮನೆಗೆ ಹತ್ತಿರದ ಸ್ಥಳವಾಗಿತ್ತು.

ತಂತ್ರಜ್ಞಾನದ ನೆರವಿನಿಂದ ತನಿಖೆ ಪ್ರಗತಿ ಹೊಂದುತ್ತಿದ್ದರೂ ಪೊಲೀಸರ ಇನ್ನೊಂದು ತಂಡ ರಚಿಸಿ ಅವರು ಚೂಲೈಮೆಡುಗೆ ಹೋಗಿ ಫೋಟೋ ಹಿಡಿದುಕೊಂಡು ಮನೆಮನೆಗೆ ಹೋಗಿ ವಿಚಾರಣೆ ನಡೆಸಿದರು. ಈ ಫೋಟೋದಲ್ಲಿರುವ ವ್ಯಕ್ತಿಯನ್ನು ಎಲ್ಲಾದರೂ ನೋಡಿದ್ದೀರಾ ಎಂದು ಕೇಳಿದರು.

ಕೊನೆಗೆ ತಿರುಚಿ ಮೂಲದ 50 ವರ್ಷದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನಟೇಶನ್ ಎಂಬ ವ್ಯಕ್ತಿ ಗುರುತು ಹಿಡಿದುಬಿಟ್ಟ.'' ಈತ ರಾಮ್ ಕುಮಾರ್ ಎಂದೂ, ತಾನು ಮತ್ತು ರಾಮ್ ಕುಮಾರ್ ಮೂರು ತಿಂಗಳು ಒಂದೇ ರೂಮಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದೆವು'' ಎಂದು ಪೊಲೀಸರಿಗೆ ಮಾಹಿತಿ ನೀಡಿದ.

ಅಲ್ಲದೆ ಸ್ವಾತಿಯ ಕೊಲೆ ಮಾಡಿದ ದಿನ ರಾಮ್ ಕುಮಾರ್ ಧರಿಸಿದ್ದ ಹಸಿರು ಬಣ್ಣದ ಶರ್ಟ್, ಆತನ ಡೈರಿ, ಅದರಲ್ಲಿ ತಿರುನಲ್ವೇಲಿಯ ವಿಳಾಸ ಎಲ್ಲಾ ಸಿಕ್ಕದವು. ಕೂಡಲೇ ಚೆನ್ನೈ ಪೊಲೀಸ್ ಆಯುಕ್ತ ತಿರುನಲ್ವೇಲಿ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಜಾಗೃತರಾಗುವಂತೆ ಸೂಚಿಸಿದರು. 

ರಾತ್ರಿ 11.20ರ ಸುಮಾರಿಗೆ ತಿರುನಲ್ವೇಲಿಯ ತೆಂಕಾಸಿ ಪೊಲೀಸ್ ಇನ್ಸ್ ಪೆಕ್ಟರ್ ಬಾಲಮುರುಗನ್ ಮತ್ತು ನಾಲ್ವರು ಅಧಿಕಾರಿಗಳನ್ನೊಳಗೊಂಡ ತಂಡ ಮೀನಾಕ್ಷಿಪುರಂನ ಮನೆಗೆ ತೆರಳಿ ಸುತ್ತುವರಿದರು. ಮನೆಯ ಹಿಂಬದಿ ಕೋಣೆಯಲ್ಲಿ ಮಲಗಿದ್ದ ರಾಮ್ ಕುಮಾರ್ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ. ಆದರೆ ಪೊಲೀಸರು ಅವನನ್ನು ಸುತ್ತುವರಿದಿದ್ದರು. ಅವನನ್ನು ಬಂಧಿಸಲು ಹೋದಾಗ ಕತ್ತಿಯಿಂದ ಕುತ್ತಿಗೆ ಸೀಳಿಕೊಂಡ. ಕೂಡಲೇ ಪೊಲೀಸರು ಅವನನ್ನು ತೆಂಕಾಸಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ತಿರುನಲ್ವೇಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನುಂಗಾಂಬಕ್ಕಂ ನಿಲ್ದಾಣದಲ್ಲಿ ಸ್ವಾತಿಯನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ರಾಮ್ ಕುಮಾರ್ ಶೌರಾಷ್ಟ್ರ ನಗರದ 8ನೇ ರಸ್ತೆಯಲ್ಲಿರುವ ತನ್ನ ರೂಮಿಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡ. ನಂತರ ಕೊಯಂಬೆಡುವಿಗೆ ಬಸ್ಸಿನಲ್ಲಿ ಹೋಗಿದ್ದ. ರಾಮ್ ಕುಮಾರ್ ನನ್ನು ಹಿಡಿಯಲು ಮೊದಲು 4 ಮಂದಿ ಪೊಲೀಸ್ ಅಧಿಕಾರಿಗಳಿದ್ದ ತಂಡ ಕೊನೆಗೆ ಪೊಲೀಸರನ್ನೊಳಗೊಂಡ ತಂಡವಾಗಿ ನಗರದ ವಿವಿಧ ಭಾಗಗಳಲ್ಲಿ ತನಿಖೆ ನಡೆಸಿದ್ದರು.
ತನಿಖೆಯ ಪ್ರಮುಖ ಭಾಗ ಮುಗಿದಿದ್ದು, ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com