ಪ್ರಧಾನಿ ಮೋದಿ ಸಚಿವ ಸಂಪುಟ ಪುನಾರಚನೆ ಜುಲೈ 5ಕ್ಕೆ
ನವದೆಹಲಿ: ಹಲವು ದಿನಗಳಿಂದ ಸುದ್ದಿಯಲ್ಲಿದ್ದ ಕೇಂದ್ರ ಸಚಿವ ಸಂಪುಟ ಪುನಾರಚನೆ ಜು.5 ಕ್ಕೆ ನಡೆಯಲಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಸಚಿವ ಸಂಪುಟ ಪುನಾರಚನೆಯನ್ನು ಖಚಿತಪಡಿಸಿದ್ದು ಜು.5 ರಂದು ಬೆಳಿಗ್ಗೆ 11 ಕ್ಕೆ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೂ.30 ರಂದು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಹೋದ್ಯೋಗಿಗಳ ಕಾರ್ಯಕ್ಷಮತೆ ಪರಿಶೀಲಿಸಲು ಸಭೆ ನಡೆಸಿದ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಬಗ್ಗೆ ಉಹಾಪೋಹಗಳಿದ್ದವು.
ಸಂಪುಟ ಪುನಾರಚನೆಗು ಮುನ್ನ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಪ್ರಾತಿನಿಧ್ಯಕ್ಕೆ ಮೋದಿ ಮಹತ್ವ ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಂಭಾವ್ಯ ಸಚಿವರ ಬಗ್ಗೆಯೂ ಮಾಹಿತಿ ದೊರೆತಿದ್ದು ಪುರುಷೋತ್ತಮ್ ರೂಪಾಲ್, ಎಸ್ ಎಸ್ ಅಹ್ಲುವಾಲಿಯಾ, ರಾಮ್ ದಾಸ್ ಅಠಾವಳೆ, ಅನುಪ್ರಿಯಾ ಪಟೇಲ್, ಮಹೇಂದ್ರ ನಾಥ್ ಪಾಂಡೆ, ಅರ್ಜುನ್ ರಾಮ್ ಮೇಘವಾಲ್, ಪಿಪಿ ಚೌಧರಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ