ಗುರುಗ್ರಾಮ: ಬಾಂಗ್ಲಾದೇಶದ ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ ಮೇಲೆ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟ ಭಾರತದ ವಿದ್ಯಾರ್ಥಿನಿ ತಾರಿಷಿ ಜೈನ್ ಅವರ ಅಂತಿಮ ಸಂಸ್ಕಾರ ತವರೂರಿನಲ್ಲಿ ಸೋಮವಾರ ನಡೆಯಿತು.
ಉಗ್ರರ ದಾಳಿಯಲ್ಲಿ ಮಡಿದ ತಾರಿಷಿ ಅವರ ಪಾರ್ಥೀವ ಶರೀರವನ್ನು ಭಾರತ ಸರ್ಕಾರ ಅವರ ಕುಟುಂಬಕ್ಕೆ ಒಪ್ಪಿಸಿದ್ದು, ಹಲವು ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.
ಹರ್ಯಾಣದ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ, ಗುರ್ ಗಾಂವ್ ಜಿಲ್ಲಾಧಿಕಾರಿ ಟಿ.ಎಲ್ ಸತ್ಯಪ್ರಕಾಶ್ ಹಾಗೂ ಇತರ ಸಿಬ್ಬಂದಿಗಳು ಇಂದು ಮಧ್ಯಾಹ್ನ ದೆಹಲಿಯ ವಿಮಾನನಿಲ್ದಾಣದಲ್ಲಿ ಪಾರ್ಥೀವ ಶರೀರವನ್ನು ಸ್ವೀಕರಿಸಿದರು. ಈ ವೇಳೆ ಕೇಂದ್ರ ಸಚಿವ ಪಿಯೂಶ್ ಘೋಯಲ್ ಹಾಗೂ ಮತ್ತಿತರರು ಗೌರವ ಸಲ್ಲಿಸಿದರು.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಂದೆ ಬಾಂಗ್ಲಾ ರಾಜಧಾನಿ ಢಾಕಾದ ಪ್ರದೇಶವೊಂದರಲ್ಲಿ ಉಡುಪಿನ ವ್ಯಾಪಾರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈಕೆ ಢಾಕಾಗೆ ಆಗಮಿಸಿದ್ದು, ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ಉಗ್ರ ದಾಳಿಯಲ್ಲಿ ತಾರಿಷಿ ಸೇರಿದಂತೆ 22 ಒತ್ತೆಯಾಳುಗಳು ಸಾವನ್ನಪ್ಪಿದ್ದು, ಮೃತರ ಪೈಕಿ ಹೆಚ್ಚಿನವರು ಇಟಲಿ ಮತ್ತು ಜಪಾನಿಯರಾಗಿದ್ದಾರೆ ಎಂಬುವುದಾಗಿ ವರದಿಯಾಗಿತ್ತು.