ಮುಂಬೈ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ವಿಚಾರಣೆಗೆ ಒಳಗಾಗಿದ್ದ ವಿವಾದಿತ ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕಂಡಿವಲ್ಲಿ ಪೊಲೀಸರು ಸ್ಥಳೀಯ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಸುಖವಿಂದರ್ ಕೌರ್ ಅಲಿಯಾಸ್ ರಾಧೆ ಮಾ ಹೆಸರನ್ನು ಕೈಬಿಡಲಾಗಿದೆ.
ರಾಧೆ ಮಾ ವಿರುದ್ಧದ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಮಗೆ ಇದುವರೆಗೂ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಈ ಮಧ್ಯೆ, ದೂರು ನೀಡಿದ ಮಹಿಳೆ ಪತಿ ಹಾಗೂ ಸೊಸೆ ಸೇರಿದಂತೆ ಇತರೆ ಆರು ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.
ಕಳೆದ ವರ್ಷ ರಾಧೆ ಮಾ ಅವರ ಸೂಚನೆ ಮೇರೆಗೆ ನನ್ನ ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ - ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಾರೆ. ಅಲ್ಲದೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು.