
ಪಾಟ್ನಾ : ಖಾಸಗಿ ಸುದ್ದಿ ವಾಹಿನಿಯೊಂದರ ಪತ್ರಕರ್ತನಿಗೆ ಕಾರ್ಯಕ್ರಮ ಮೊಂದರಲ್ಲಿ ಬಿಹಾರದ ಆರೋಗ್ಯ ಸಚಿವ ಮತ್ತು ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಬೆದರಿಕೆ ಹಾಕಿದ್ದಾರೆ.
ತೇಜ್ ಪ್ರತಾಪ್ ಯಾದವ್ ತನ್ನ ತಂದೆ ಹಾಗೂ ಕಿರಿಯ ಸಹೋದರ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ರಾಷ್ಟ್ರೀಯ ಜನತಾ ದಳದ 20ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಐಳ್ಳಲು ಬಂದಿದ್ದರು.
ವೇದಿಕೆಯಲ್ಲಿದ್ದ ತೇಜ್ ಪ್ರತಾಪ್ ಯಾದವ್ ಅಲ್ಲಿದ್ದ ಪತ್ರಕರ್ತರೋರ್ವರಿಗೆ ಸ್ಟಿಲ್ ಕ್ಯಾಮೆರಾವನ್ನು ತನಗೆ ಕೊಡುವಂತೆ ಕೇಳಿಕೊಂಡರು. ಆ ಪ್ರಕಾರ ಪತ್ರಕರ್ತ ಅವರಿಗೆ ತನ್ನ ಕ್ಯಾಮೆರಾ ಕೊಟ್ಟ. ಈ ಕ್ಯಾಮೆರಾದಿಂದ ತೇಜ್ ಪ್ರತಾಪ್ ಕೆಲವು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಂತೆಯೇ ಮತ್ತೊಬ್ಬ ಪತ್ರಕರ್ತ ತೇಜ್ ಪ್ರತಾಪ್ ಫೋಟೋ ತೆಗೆಯುತ್ತಿದ್ದುದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದರು.
ಇದನ್ನು ನೋಡಿದ ತೇಜ್ ಪ್ರತಾಪ್ ಕೋಪಗೊಂಡು ಆ ಫೋಟೋಗಳನ್ನು ಡಿಲೀಟ್ ಮಾಡುವಂತೆ ಸೂಚಿಸಿದರು. ಆದರೆ ಆ ಪತ್ರಕರ್ತ ಅದಕ್ಕೆ ಒಪ್ಪಲಿಲ್ಲ. ಇದರಿಂದ ಇನ್ನಷ್ಟು ಕ್ರುದ್ಧರಾದ ತೇಜ್ ಪ್ರತಾಪ್, ನಿಮ್ಮ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ತೇಜ್ ಪ್ರತಾಪ್ ವರ್ತನೆಯಿಂದ ಅಸಮಾಧಾನಗೊಂಡ ಎಲ್ಲಾ ಪತ್ರಕರ್ತರು ಸಮಾರಂಭವನ್ನು ಬಹಿಷ್ಕರಿಸಿ ಹೊರನಡೆಯುವುದಾಗಿ ತಿಳಿಸಿದರು.
ಲಾಲು ಪ್ರಸಾದ್ ಯಾದವ್ ಒಡನೆಯೇ ಮಧ್ಯ ಪ್ರವೇಶಿಸಿ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಪತ್ರಕರ್ತನಿಗೆ ಆ ಚಿತ್ರಗಳನ್ನು ಡಿಲೀಟ್ ಮಾಡುವಂತೆ ಕೋರಿದರು ! ಆದರೆ ಆ ಪತ್ರಕರ್ತ ಅದಕ್ಕೆ ಸೊಪ್ಪು ಹಾಕಲಿಲ್ಲ. ನಂತ ಕಾರ್ಯಕ್ರಮ ಮುಗಿದಾಗ ಲಾಲು ಪತ್ರಕರ್ತನನ್ನು ತಮ್ಮ ಬಳಿ ಕರೆಸಿಕೊಂಡು ಪುತ್ರ ತೇಜ್ ಪ್ರತಾಪ್ ಗೆ ಶೇಕ್ ಹ್ಯಾಂಡ್ ಮಾಡಸಿ ಪ್ರಹಸನಕ್ಕೆ ಅಂತ್ಯ ಹಾಡಿದರು.
Advertisement