
ಶ್ರೀನಗರ: ಎನ್ ಕೌಂಟರ್ ನಲ್ಲಿ ಹತ್ಯೆಗೀಡಾದ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಕಮಾ೦ಡರ್ ಬುರ್ಹಾನ್ ಮುಜಾಫರ್ ವಾನಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದಾರೆ.
ಜು.9 ರಂದು ಮುಜಾಫರ್ ವಾಣಿಯ ಅಂತ್ಯಕ್ರಿಯೆ ನಡೆದಿದ್ದು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹೊರತಾಗಿಯೂ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಮುಜಾಫರ್ ವಾನಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವುದಕ್ಕೆ ಆಕ್ರೋಶಗೊಂಡಿರುವ ಯುವಕರ ಗುಂಪು ಅನಂತ್ ನಾಗ್, ಲಾರ್ನೂ, ಬಂಡೀಪೋರಾ, ಖಾಝಿಗುಂಡ್ ಗಳಲ್ಲಿರುವ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದು ಘಟನೆಯಲ್ಲಿ ಮೂವರು ಪೊಲೀಸರು ಸೇರಿದಂತೆ 11 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲೂ ಕಲ್ಲು ತೂರಾಟ ಘಟನೆ ವರದಿಯಾಗಿದ್ದು ಕುಲ್ಗಾಮ್ ನಲ್ಲಿರುವ ಬಿಜೆಪಿ ಕಚೇರಿ ಮೇಲು ಉದ್ರಿಕ್ತರ ಗುಂಪು ದಾಳಿ ನಡೆಸಿದ್ದು, ಕಾಶ್ಮೀರದ ಪ್ರತ್ಯೇಕತಾವಾದಿಗಳು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಿನಾ ಭಟ್ ಆರೋಪಿಸಿದ್ದಾರೆ. ಸ್ಥಳೀಯ ಯುವಕರನ್ನು ಭಯೋತ್ಪಾದನೆದೆ ಸೆಳೆಯುವ ಕಾರ್ಯ ಮಾಡುತ್ತಿದ್ದ ಬುರ್ಹಾನ್ ವಾನಿಯನ್ನು ಜಮ್ಮು- ಕಾಶ್ಮೀರದ ಅನ೦ತ್‍ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ಎನ್ ಕೌಂಟರ್ ಮಾಡಿದ್ದವು. ಈ ಘಟನೆ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪುಲ್ವಾಮಾ, ಶ್ರೀನಗರ, ಜಮ್ಮು, ಅನಂತನಾಗ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಘೋಷಿತ ನಿಷೇಧಾಜ್ಞೆ ಪರಿಸ್ಥಿತಿ ನಿರ್ಮಾಣವಾಗಿದ್ದು ಮುಜಾಫರ್ ವಾನಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿರುವುದು ಅಚ್ಚರಿ ಮೂಡಿಸಿದೆ.
Advertisement