ಜಾಕಿರ್ ನಾಯಕ್
ಜಾಕಿರ್ ನಾಯಕ್

ಜಾಕಿರ್ ನಾಯಕ್ ನ ಪೀಸ್ ಟಿವಿ ಪ್ರಸಾರ ಮಾಡುವವರ ವಿರುದ್ಧ ಕ್ರಮ: ಮಾಹಿತಿ ಮತ್ತು ಪ್ರಸಾರ ಇಲಾಖೆ

ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನಲ್ ಡೌನ್ ಲಿಂಕ್ ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಅನುಮತಿ ನೀಡಲಾಗಿಲ್ಲ

ನವದೆಹಲಿ: ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನಲ್ ಡೌನ್ ಲಿಂಕ್ ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಅನುಮತಿ ನೀಡಲಾಗಿಲ್ಲ, ಪೀಸ್ ಚಾನಲ್ ನ್ನು ಪ್ರಸಾರ ಮಾಡುವ ಕೇಬಲ್ ಆಪರೇಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಪೀಸ್ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಕೋಮುಗಲಭೆಗೆ ಪ್ರಚೋದನೆ ನೀಡುವ ಅಂಶಗಳನ್ನು ಹೊಂದಿರುವುದರಿಂದ, ಪೀಸ್ ಟಿವಿ ಚಾನಲ್ ನ್ನು ಪ್ರಸಾರ ಮಾಡುತ್ತಿರುವ ಕೇಬಲ್ ಆಪರೇಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇಲಾಖೆಯ ಉಪನಿರ್ದೇಶಕ ಶಂಕರ್ ಲಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಇಲಾಖೆಯಿಂದ ಅನುಮತಿ ಪಡೆಯದ ಪೀಸ್ ಟಿವಿ ಎಂಬ ಖಾಸಗಿ ಚಾನಲ್ ಕೋಮುಗಲಭೆ, ಉಗ್ರರಿಗೆ ಸ್ಫೂರ್ತಿದಾಯಕವಾಗುವ ಅಂಶಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ವರದಿ ಬಂದಿದೆ ಎಂದು ತಿಳಿಸಿದ್ದಾರೆ.

ಢಾಕಾದಲ್ಲಿ ದಾಳಿ ನಡೆಸಿ 20 ಜನರನ್ನು ಹತ್ಯೆ ಮಾಡಿದ್ದ ಉಗ್ರರಿಗೆ ಜಾಕಿರ್ ನಾಯಕ್ ಹಾಗೂ ಪೀಸ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಆತನ ಭಾಷಣಗಳು ಸ್ಫೂರ್ತಿದಾಯಕವಾಗಿತ್ತು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಗುಪ್ತಚರ ಇಲಾಖೆ ಜಾಕಿರ್ ನಾಯಕ್ ಮೇಲೆ ಕಣ್ಣಿಟ್ಟಿದ್ದು, ಉಗ್ರರಿಗೆ ಪ್ರಚೋದನೆ ನೀಡುವ ಆರೋಪ ಕೇಳಿಬಂದಿರುವ ಜಾಕಿರ್ ನಾಯಕ್ ನ ಪೀಸ್ ಟಿವಿಯನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

Related Stories

No stories found.

Advertisement

X
Kannada Prabha
www.kannadaprabha.com