ಚಂಡೀಗಢ: ಪಂಜಾಬ್ ನ ಗುರುದಾಸ್ಪುರ ವಲಯದ ಅಜ್ಞಾಲ ಎಂಬಲ್ಲಿ ಭಾರತದೊಳಗೆ ನುಸುಳಲೆತ್ನಿಸಿದ ಮೂವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ ಯೋಧರು ಗುಂಡಿಕ್ಕಿ ಸಾಯಿಸಿದ್ದಾರೆ.
ಇಂದು ನಸುಕಿನ ವೇಳೆ ಗಡಿ ಭದ್ರತಾ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಐವರು ಶಂಕಿತರು ದಾರ್ಯ ಮನ್ಸೂರ್ ಗ್ರಾಮದಲ್ಲಿ ಫಲ್ಕು ನುಲ್ಲಾ ಎಂಬಲ್ಲಿ ಭಾರತದ ಗಡಿಯೊಳಗೆ ನುಸುಳಿ ಬರಲು ನುಸುಳುಕೋರರು ಯತ್ನಿಸುತ್ತಿದ್ದರು. ಪಂಜಾಬ್ ನ ಅಮೃತಸರ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ಪ್ರದೇಶವಿದ್ದು, ಅಜ್ಞಾಲಾ ಗ್ರಾಮದಿಂದ 15 ಕಿಲೋ ಮೀಟರ್ ದೂರದಲ್ಲಿದೆ. ಆದರೆ ಎನ್ ಕೌಂಟರ್ ನಡೆದಿದ್ದು ಗುರ್ದಾಸ್ಪುರ ಜಿಲ್ಲೆಯಲ್ಲಿ.
ಈ ನುಸುಳುಕೋರರಿಗೆ ಭಾರತದೊಳಗೆ ಬರದಂತೆ ಹಲವಾರು ಬಾರಿ ಯೋಧರು ಎಚ್ಚರಿಕೆ ನೀಡಿದ್ದರು. ಆದರೆ ಉದ್ದೇಶಪೂರ್ವಕವಾಗಿ ಯೋಧರ ಮಾತನ್ನು ಧಿಕ್ಕರಿಸಿ ಒಳನುಗ್ಗುತ್ತಿದ್ದರು. ಹೀಗಾಗಿ ಇಂದು ಮುಂಜಾನೆ ಯೋಧರು ಅವರನ್ನು ಕೊಂದರು. ಆದರೆ ಇನ್ನಿಬ್ಬರು ತಪ್ಪಿಸಿಕೊಂಡು ಪಾಕಿಸ್ತಾನಕ್ಕೆ ಓಡಿಹೋಗಿದ್ದಾರೆ.
ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ. 20ರಿಂದ 25 ವರ್ಷದೊಳಗಿನವರಾಗಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಿಂದ ಯೋಧರು ಪಾಕಿಸ್ತಾನದ ಮೊಬೈಲ್ ಫೋನ್, ಆ ದೇಶದ ಸಿಮ್ ಕಾರ್ಡುಗಳನ್ನು, 655 ರೂಪಾಯಿ ಭಾರತೀಯ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ಗುರುತು, ಹಿನ್ನೆಲೆ, ತಪ್ಪಿಸಿಕೊಂಡು ಹೋದವರ ವಿವರ ಇನ್ನಷ್ಟೆ ತಿಳಿಯಬೇಕಿದೆ.