ಅಶೋಕ್ ಖೇಮ್ಕಾ ವಿರುದ್ಧ ಹರ್ಯಾಣ ಸರ್ಕಾರದಿಂದ ಚಾರ್ಜ್ ಶೀಟ್

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಹರ್ಯಾಣ ಸರ್ಕಾರ ಚಾರ್ಜ್ ಶೀಟ್ ದಾಖಲಿಸಿದೆ.
ಅಶೋಕ್ ಖೇಮ್ಕಾ
ಅಶೋಕ್ ಖೇಮ್ಕಾ

ಚಂಡೀಗಢ: ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಹರ್ಯಾಣ ಸರ್ಕಾರ ಚಾರ್ಜ್ ಶೀಟ್ ದಾಖಲಿಸಿದೆ.

ಹರ್ಯಾಣದ ಬೀಜ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಅಶೋಕ್ ಖೇಮ್ಕಾ 4 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಕಂಪೆನಿಯ ಮಧ್ಯೆ ನಡೆದ ಭೂ ವ್ಯವಹಾರದ ಭೂಮಿಯ ಪರಿವರ್ತನೆ ಆದೇಶವನ್ನು ರದ್ದು ಪಡಿಸಿದ್ದ ಹಿನ್ನೆಲೆಯಲ್ಲಿ ಅಶೋಕ್ ಖೇಮ್ಕಾ ವಿರುದ್ಧ ಈ ಹಿಂದಿನ ಕಾಂಗ್ರೆಸ್ ಸರ್ಕಾರ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ ಆರೋಪದಡಿ ಆರೋಪಪಟ್ಟಿ ದಾಖಲಿಸಿತ್ತು. ಕಳೆದ ನವೆಂಬರ್ ನಲ್ಲಿ ಈ ಆರೋಪಪಟ್ಟಿಯನ್ನು ಹರ್ಯಾಣ ಸರ್ಕಾರ ರದ್ದುಗೊಳಿಸಿತ್ತು. ಈ ಬೆನ್ನಲ್ಲೇ ಅಶೋಕ್ ಖೇಮ್ಕಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ದಾಸ್ತಾನು ಮಾಡಲಾಗಿದ್ದ ಬೀಜಗಳನ್ನು ಮಾರಾಟ ಮಾಡದೆ 4 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಹರ್ಯಾಣ ಸರ್ಕಾರ ಆರೋಪಪಟ್ಟಿಯಲ್ಲಿ ತಿಳಿಸಿದೆ.

2012–13ರ ಹಿಂಗಾರು ಹಂಗಾಮಿನಲ್ಲಿ 22.21 ಕೋಟಿ ಮೌಲ್ಯದ 8,700 ಕ್ವಿಂಟಾಲ್ ಪ್ರಮಾಣದ ಗೋಧಿ ಬೀಜದ ದಾಸ್ತಾನನ್ನು ಮಾರಾಟ ಮಾಡದೆ ನಿಗಮಕ್ಕೆ 4 ಕೋಟಿ ನಷ್ಟ ಉಂಟು ಮಾಡಲಾಗಿದೆ ಎಂದು ಖೇಮ್ಕಾ ವಿರುದ್ಧ ಆಪಾದಿಸಲಾಗಿದೆ.

ವಾದ್ರಾಗೆ ಸೇರಿದ ಭೂಮಿಯ ಪರಿವರ್ತನೆ ಆದೇಶ ರದ್ದುಪಡಿಸಿದ ಬೆನ್ನಲ್ಲೇ ಖೇಮ್ಕಾ ಅವರನ್ನು ಬೀಜ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗಿತ್ತು. ನಂತರ ಅವರನ್ನು ವಿವಿಧ ಕಡೆ ವರ್ಗಾಯಿಸಲಾಗಿದ್ದು ಪ್ರಸ್ತುತ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com