ಅಹ್ಮದಾಬಾದ್ : ಪಟೇಲ್ ಸಮುದಾಯದ ಮೀಸಲಾತಿ ಆಂದೋಲನದ ನಾಯಕ, ಹಾರ್ದಿಕ್ ಪಟೇಲ್ ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಕಳೆದ 9ತಿಂಗಳಿಂದ ಸೂರತ್ ನಲ್ಲಿ ಜೈಲು ವಾಸವನ್ನು ಅನುಭವಿಸಿದ ಬಳಿಕ ಇಂದು ಅವರನ್ನು ಬಿಡುಗಡೆಗೊಳಿಸಲಾಯಿತು. ಲಾಜಪುರ ಸೆಂಟ್ರಲ್ ಜೈಲಿನ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರು ಹಾರ್ದಿಕ್ ಪಟೇಲ್ ಅವರನ್ನು ಸ್ವಾಗತಿಸಿದರು.
ಪಟೇಲ್ ಅವರಿಗೆ ಕೊನೆಯ ಕೇಸ್‌ನಲ್ಲಿ ನ್ಯಾಯಾಲಯವ ಕಳೆದ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ದೇಶದ್ರೋಹದ ಎರಡು ಪ್ರಕರಣಗಳಲ್ಲಿ ಗುಜರಾತ್ ಹೈಕೋರ್ಟ್ ಹಾರ್ದಿಕ್ ಪಟೇಲ್‌ಗೆ ಕಳೆದ ವಾರ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದನ್ನು ಅನುಸರಿಸಿ ಪಟೇಲ್‌ಗೆ ವೀಸ್‌ನಗರ್ ಕ್ಷೇತ್ರದ ಬಿಜೆಪಿ ಶಾಸಕ ಹೃಷೀಕೇಶ್ ಪಟೇಲ್ ಕಾರ್ಯಾಲಯದ ಮೇಲೆ ಹಾಗೂ ಸರ್ಕಾರದ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲೂ ಜಾಮೀನು ಸಿಕ್ಕಿತ್ತು.
ವೀಸ್‌ನಗರ್ ನ್ಯಾಯಾಲಯ ತನಗೆ ಜಾಮೀನು ನಿರಾಕರಿಸಿದುದನ್ನು ಪ್ರಶ್ನಿಸಿ ಹಾರ್ದಿಕ್ ಪಟೇಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಕಳೆದ ಸೋಮವಾರ ನಡೆದು ಪಟೇಲ್‌ಗೆ ಜಾಮೀನು ಮಂಜೂರಾಗಿತ್ತು.
ಮೀಸಲಾತಿಗಾಗಿ ತನ್ನ ಹೋರಾಟ ಮುಂದುವರೆಯಲಿದ್ದು, ಆನಂದಿಬೆನ್ ನೇತೃತ್ವದ ಸರ್ಕಾರ ಪಟೇಲ್ ಸಮುದಾಯಕ್ಕೆ ಶೇ. 10 ರಷ್ಟು ಮೀಸಲಾತಿ ನೀಡುವವರೆಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
Advertisement