
ನವದೆಹಲಿ: ಭಾರತೀಯ ಜನತಾ ಪಕ್ಷದಿಂದ(ಬಿಜೆಪಿ) ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ನವಜೋತ್ ಸಿಂಗ್ ಸಿದ್ಧು ದಿಢೀರ್ ರಾಜಿನಾಮೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಯಾವ ನಿರ್ದಿಷ್ಟ ಕಾರಣಕ್ಕೆ ರಾಜಿನಾಮೆ ನೀಡಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಈ ವರ್ಷದ ಕೊನೆ ಅಥವಾ 2017ರ ಆರಂಭದಲ್ಲಿ ಪಂಬಾಜ್ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಸಿದ್ಧು ರಾಜಿನಾಮೆ ನೀಡಿರುವುದು ನಾನಾ ಊಹಾಪೋಹಗಳಿಗೆ ನಾಂದಿಹಾಡಿದೆ.
ಪಂಜಾಬ್ ನ ಅಮೃತಸರದಿಂದ ಲೋಕಸಭೆಗೆ ಆರಿಸಿ ಬಂದಿದ್ದ ನವಜೋತ್ ಸಿಂಗ್ ಸಿದ್ಧು ಹಿರಿಯರ ಒತ್ತಡಕ್ಕೆ ಮಣಿದು ಆ ಸ್ಥಾನವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಸಿದ್ಧು ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಅವರು ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿವೆ.
ಏಪ್ರಿಲ್ ನಲ್ಲಿ ಬಿಜೆಪಿ ರಾಜ್ಯಸಭೆಗೆ ನವಜೋತ್ ಸಿಂಗ್ ಸಿದ್ಧು ಅವರನ್ನು ನಾಮನಿರ್ದೇಶನ ಮಾಡಿತ್ತು.
Advertisement