ನವದೆಹಲಿ: ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಬಿಜೆಪಿ ವಿಜೃಂಭಣೆಯಿಂದ ಆಚರಿಸಲಿದ್ದು, ಬಡವರ ಪರವಾದ ಮತ್ತು ರಾಷ್ಟ್ರೀಯತಾ ಅಜೆಂಡಾ ಕಾರ್ಯಕ್ರಮದ ಪ್ರಮುಖ ಅಂಶವಾಗಲಿದೆ. ಆಚರಣೆಯ ಅಂಗವಾಗಿ ಬಿಜೆಪಿ ಒಂದು ವಾರಗಳ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಕ್ರಮ ಕುರಿತು ಕೆಲವು ಯೋಜನೆಗಳ ಕುರಿತು ಮಾತುಕತೆ ನಡೆಸಲಾಗಿದ್ದು ಅಂತಿಮ ನಿರ್ಧಾರವನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪಕ್ಷದ ಹಿರಿಯ ಸಚಿವ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ 22ರೊಳಗೆ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಬಿಜೆಪಿ ವಿಕಾಸ ಪರ್ವ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ತಿರಂಗ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿದೆ.
ಸಭೆಯಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ ಪ್ರಧಾನಿ ಮೋದಿ, ಶ್ರಮಪಟ್ಟು ಕೆಲಸ ಮಾಡಿ, ಮುಂಗಾರು ಕಲಾಪದಲ್ಲಿ ಗುಣಮಟ್ಟದ ವಿಷಯ ಎತ್ತಿ ಚರ್ಚೆ ನಡೆಸಿ ಎಂದು ಹೇಳಿದರು.
ಮೋದಿಯವರ ಯಶಸ್ಸಿನ ವಿದೇಶ ಪ್ರಯಾಣ, ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದು ಮೊದಲಾದವಗಳ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದರು.
ಬಿಜೆಪಿ ನಾಯಕರು ಜೂನ್ 21ರ ಯೋಗ ದಿನ ಮತ್ತು ತುರ್ತು ವಿರೋಧಿ ದಿನದ ಯಶಸ್ಸಿನ ಬಗ್ಗೆಯೂ ವಿವರಿಸಿದರು.