ನವದೆಹಲಿ: ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಗೌರವಾರ್ಥ ಸ್ಮಾರಕಕ್ಕೆ ಶಂಕುಸ್ಥಾಪನೆ ಇದೇ 27ರಂದು ಅವರ ಸಮಾಧಿ ಸ್ಥಳ ತಮಿಳು ನಾಡಿನ ರಾಮೇಶ್ವರದಲ್ಲಿ ನೆರವೇರಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಉತ್ತರಿಸಿದ ಅವರು, ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಜಾಗ ಬೇಕಾಗಿದ್ದು, 1.8 ಎಕರೆ ಜಾಗ ಮಾತ್ರ ಸಿಕ್ಕಿದೆಯಷ್ಟೆ ಎಂದರು.
ನಮ್ಮ ಯೋಜನೆಗೆ ತಮಿಳುನಾಡು ಸರ್ಕಾರ ಸಹಕಾರ ನೀಡುತ್ತಿದೆ. ಸ್ಮಾರಕದ ವಿನ್ಯಾಸ ಅಂತಿಮಗೊಂಡಿದ್ದು, ಇನ್ನು ಉಳಿದ ಭೂಮಿ ಸಿಗಲು ಕಾಯುತ್ತಿಲ್ಲ. ಈಗಿರುವ ಭೂಮಿಯಲ್ಲಿ ಕೆಲಸ ಮುಂದುವರಿಸುತ್ತೇವೆ ಎಂದರು.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕಳೆದ ವರ್ಷ ಜುಲೈ 27ರಂದೇ ನಿಧನರಾಗಿದ್ದರು.