ಮುಂಬೈ - ಅಹಮದಾಬಾದ್ ಬುಲೆಟ್ ರೈಲು ದರ ವಿಮಾನ ದರಕ್ಕಿಂತ ಕಡಿಮೆ

ಪ್ರಧಾನಿ ನರೇಂದ್ರ ಮೋದಿಯವರ ಬಹು ನಿರೀಕ್ಷಿತ ಬುಲೆಟ್ ರೈಲು ಯೋಜನೆ ಮುಂದಿನ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಪ್ರಯಾಣ ದರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಹು ನಿರೀಕ್ಷಿತ ಬುಲೆಟ್ ರೈಲು ಯೋಜನೆ ಮುಂದಿನ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಪ್ರಯಾಣ ದರ ವಿಮಾನ ದರಕ್ಕಿಂತಲೂ ಕಡಿಮೆ ಇರಲಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಸುರೇಶ್ ಪ್ರಭು ಅವರು, ಮುಂದಿನ ಆರು ವರ್ಷಗಳಲ್ಲಿ ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಯೋಜನೆ ಪೂರ್ಣಗೊಳ್ಳಲಿದ್ದು, ಇದರ ದರ ವಿಮಾನ ದರಕ್ಕಿಂತ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ಮುಂಬೈ ಮತ್ತು ಅಹಮದಾಬಾದ್ ನಡುವೆ ಒಟ್ಟು 508 ಕಿಮೀ ಇದ್ದು, ಪ್ರಸ್ತುತ ದುರಂತೋ ಎಕ್ಸ್​ಪ್ರೆಸ್ ರೈಲು 7 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳಿಸುತ್ತಿದೆ. ಬುಲೆಟ್ ರೈಲು ಗರಿಷ್ಠ 350 ಕಿ.ಮೀ. ವೇಗದಲ್ಲಿ ಕೇವಲ 2 ಗಂಟೆಗಳಲ್ಲಿ ಈ ದೂರವನ್ನು ಪೂರ್ಣಗೊಳಿಸಲಿದೆ ಎಂದರು.
ಜಪಾನ್ ಸರ್ಕಾರದ ನೆರವಿನೊಂದಿಗೆ ಈ ರೈಲು ಯೋಜನೆ ರೂಪಿಸಲಾಗಿದ್ದು, ಜಪಾನ್ ಸರ್ಕಾರ ಈಗಾಗಲೇ ಈ ಎರಡೂ ನಗರಗಳ ನಡುವೆ ಬುಲೆಟ್ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ವರದಿ ಸಿದ್ಧಪಡಿಸಿದೆ ಎಂದು ಸಚಿವರು ಉತ್ತರಿಸಿದರು.
ಒಟ್ಟು 97,636 ಕೋಟಿ ರೂ. ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಶೇ. 81 ರಷ್ಟು ಮೊತ್ತವನ್ನು ಜಪಾನ್ ಸರ್ಕಾರ ಸಾಲದ ರೂಪದಲ್ಲಿ ಒದಗಿಸಲಿದೆ. ಯೋಜನಾ ವೆಚ್ಚ ಯೋಜನೆ ಪೂರ್ಣಗೊಳ್ಳುವ ಅವಧಿಯಲ್ಲಿ ಹೆಚ್ಚಳವಾಗುವ ಮೊತ್ತ, ಸಾಲದ ಬಡ್ಡಿ ಮತ್ತು ಇತರೇ ಖರ್ಚುಗಳನ್ನು ಒಳಗೊಂಡಿದೆ. ಜಪಾನ್ ಸರ್ಕಾರ ಶೇ. 0.1 ವಾರ್ಷಿಕ ಬಡ್ಡಿ ದರದಲ್ಲಿ 50 ವರ್ಷಗಳ ಅವಧಿಗೆ ಸಾಲ ನೀಡುತ್ತಿದೆ. ಆದರೆ ರೈಲು ಮಾರ್ಗಕ್ಕೆ ಅಗತ್ಯವಿರುವ ಉಪಕರಣಗಳನ್ನು ಜಪಾನ್​ನಿಂದ ಅಮದು ಮಾಡಿಕೊಳ್ಳಬೇಕು ಎಂದು ಜಪಾನ್ ಕರಾರಿನಲ್ಲಿ ತಿಳಿಸಿದೆ.
ಎರಡನೇ ಹಂತದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೈ ಸ್ಪೀಡ್ ರೈಲು ಮಾರ್ಗ ಅಭಿವೃದ್ಧಿಗೊಳಿಸಲು ಸಮೀಕ್ಷೆ ನಡೆಸಲು ವಿವಿಧ ರೈಲು ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಮುಂಬೈ- ಚೆನ್ನೈ, ದೆಹಲಿ-ಕೋಲ್ಕತ, ದೆಹಲಿ-ನಾಗಪುರ, ಮುಂಬೈ-ನಾಗಪುರ ಮಾರ್ಗದಲ್ಲೂ ಹೈಸ್ಪೀಡ್ ರೈಲು ಯೋಜನೆ ಅನುಷ್ಠಾನ ಸಂಬಂಧ ಸಮೀಕ್ಷೆ ನಡೆಸಲು ವಿವಿಧ ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಎಂದು ಪ್ರಭು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com