

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಮುಜಾಫರ್ ವನಿಯ ಹತ್ಯೆ ನಂತರ ಕಾಶ್ಮೀರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು, ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಜು.23 ರಂದು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ರಾಜನಾಥ್ ಸಿಂಗ್ ಅವರೊಂದಿಗೆ ಕೇಂದ್ರದ ಅರೆಸೇನಾಪಡೆಯ ಡಿಜಿ, ಸಿಆರ್ ಪಿಎಫ್ ಹಾಗು ಇಂಡೋ ಟಿಬೇಟಿಯನ್ ಗಡಿ ಭಾಗದ ಪೊಲೀಸರು( ಐಟಿಬಿಪಿ) ಕಾಶ್ಮೀರಕ್ಕೆ ತೆರಳಲಿದ್ದಾರೆ. ಕಣಿವೆ ರಾಜ್ಯದ ರಾಜಧಾನಿ ಶ್ರೀ ನಗರದಲ್ಲಿ ರಾಜನಾಥ್ ಸಿಂಗ್ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಬಳಿಕ ಮೆಹಬೂಬಾ ಮುಫ್ತಿ ಹಾಗೂ ರಾಜ್ಯಪಾಲ ನರೀಂದರ್ ವೋಹ್ರಾ ಅವರೊಂದಿಗೆ ಗೃಹ ಸಚಿವರು ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ.
ಮಧ್ಯಾಹ್ನದ ವೇಳೆಗೆ ರಾಜನಾಥ್ ಸಿಂಗ್ ದೆಹಲಿಗೆ ವಾಪಸ್ಸಾಗಲಿದ್ದಾರೆ. ಉಗ್ರನ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಕಳೆದ 15 ದಿನಗಳಿಂದ ಉಂಟಾಗಿರುವ ಗಲಭೆ ಪರಿಸ್ಥಿತಿ ಮುಂದುವರೆದಿದ್ದು ಈ ವರೆಗೂ 48 ಜನರು ಮೃತಪಟ್ಟಿದ್ದು 46 ಜನರು ಗಾಯಗೊಂಡಿದ್ದಾರೆ.ಈ ಪೈಕಿ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.